ADVERTISEMENT

ಅಮರಾವತಿ: ಪ್ರವಾದಿ ಬಗ್ಗೆ ಅವಹೇಳನ; ಗುಂಪಿನಿಂದ ಕಲ್ಲು ತೂರಾಟ,21 ಪೊಲೀಸರಿಗೆ ಗಾಯ

ಪಿಟಿಐ
Published 5 ಅಕ್ಟೋಬರ್ 2024, 9:58 IST
Last Updated 5 ಅಕ್ಟೋಬರ್ 2024, 9:58 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಅಮರಾವತಿ: ಮಹಾರಾಷ್ಟ್ರದ ಅಮರಾವತಿ ನಗರದಲ್ಲಿ ಪ್ರವಾದಿ ಮುಹಮ್ಮದ್ ವಿರುದ್ಧ ಹಿಂದೂ ಸ್ವಾಮೀಜಿಯೊಬ್ಬರ ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಗುಂಪೊಂದು ಕಲ್ಲು ತೂರಾಟ ನಡೆಸಿದ ಪರಿಣಾಮ 21 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಹಿಂದೂ ಸ್ವಾಮೀಜಿ ಗಾಜಿಯಾಬಾದ್‌ನ ಯತಿ ನರಸಿಂಹಾನಂದ ಮಹಾರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಮರಾವತಿ ನಗರದ ನಾಗಪುರಿ ಗೇಟ್ ಪೊಲೀಸ್ ಠಾಣೆಯ ಹೊರಗಡೆ ಶುಕ್ರವಾರ ರಾತ್ರಿ ನಡೆದ ಕಲ್ಲು ತೂರಾಟ ಘಟನೆಯಲ್ಲಿ ಕನಿಷ್ಠ 10 ಪೊಲೀಸ್ ವಾಹನಗಳು ಹಾನಿಗೀಡಾಗಿವೆ.

ಕಲ್ಲು ತೂರಾಟ ಘಟನೆಗೆ ಸಂಬಂಧಿಸಿದಂತೆ 1,200 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಪೈಕಿ 26 ಮಂದಿಯ ಗುರುತು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೆಲವು ಸಂಘಟನೆಗಳ ಸದಸ್ಯರನ್ನು ಒಳಗೊಂಡ ಭಾರಿ ಸಂಖ್ಯೆಯ ಗುಂಪೊಂದು ರಾತ್ರಿ 8.15ರ ಸುಮಾರಿಗೆ ನಾಗ್ಪುರಿ ಗೇಟ್‌ ಪೊಲೀಸ್‌ ಠಾಣೆಗೆ ಬಂದು ಸ್ವಾಮೀಜಿ ಯತಿ ನರಸಿಂಹಾನಂದ ಮಹಾರಾಜ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಡ ಹಾಕಿತು. ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ವಿಚಾರಣೆ ನಡೆಯುತ್ತಿದೆ ಎಂದು ಠಾಣೆಯ ಅಧಿಕಾರಿ ತಿಳಿಸಿದ ನಂತರ ಆ ಗುಂಪು ವಾಪಸಾಯಿತು. ಆದರೆ ಕೆಲವರು, ಸ್ವಾಮೀಜಿಯ ಹೇಳಿಕೆಗಳ ವಿಡಿಯೊ ಹಂಚಿಕೊಳ್ಳುತ್ತಿದ್ದಂತೆ ಮತ್ತೊಂದು ದೊಡ್ಡ ಗುಂಪು ನಾಗ್ಪುರಿಗೇಟ್ ಪೊಲೀಸ್ ಠಾಣೆಗೆ ಬಂದಿದೆ. ಪೊಲೀಸ್ ಅಧಿಕಾರಿಗಳು ಗುಂಪಿನ ಮನವೊಲಿಸಲು ಪ್ರಯತ್ನಿಸಿದಾಗ, ಗುಂಪಿನಲ್ಲಿದ್ದವರು ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ’ ಎಂದು ಅವರು ತಿಳಿಸಿದರು.

‘ಪೊಲೀಸ್ ಅಧಿಕಾರಿಗಳು ಗುಂಪು ಚದುರಿಸಿ, ಪರಿಸ್ಥಿತಿ ನಿಭಾಯಿಸಿದ್ದಾರೆ. ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್‌ಎಸ್‌ಎಸ್) ಸೆಕ್ಷನ್ 163 ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ನಾಗ್ಪುರಿ ಗೇಟ್ ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟಿಗೆ ಸೇರುವುದನ್ನು ನಿರ್ಬಂಧಿಸಲಾಗಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.