ನವದೆಹಲಿ: ಇಂಡೊನೇಷ್ಯಾದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ಹೆಚ್ಚಿನ ದರ ನಿಗದಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಕೆಲವು ಕಂಪನಿಗಳ ವಿರುದ್ಧ ತನಿಖೆ ನಡೆಸುತ್ತಿರುವ ರೆವಿನ್ಯು ಗುಪ್ತಚರ ನಿರ್ದೇಶನಾಲಯವು ದಾಖಲಿಸಿರುವ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಕೋರಿ ಅಂತರರಾಷ್ಟ್ರೀಯ ಮಟ್ಟದ 21 ಸಂಘಟನೆಗಳು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರಿಗೆ ಪತ್ರ ಬರೆದಿವೆ.
ಆಸ್ಟ್ರೇಲಿಯನ್ ಸೆಂಟರ್ ಫಾರ್ ಇಂಟರ್‌ನ್ಯಾಷನಲ್ ಜಸ್ಟಿಸ್, ಬ್ಯಾಂಕ್‌ಟ್ರ್ಯಾಕ್, ಬಾಬ್ ಬ್ರೌನ್ ಫೌಂಡೇಷನ್, ಕಲ್ಚರ್ ಅನ್‌ಸ್ಟ್ರೇನ್ಡ್, ಎಕೊ ಸೇರಿದಂತೆ ಒಟ್ಟು 21 ಸಂಘಟನೆಗಳು ಈ ಪತ್ರ ರವಾನಿಸಿವೆ.
ಜಾರ್ಜ್ ಸೊರೋಸ್ ಬೆಂಬಲಿತ ‘ಆರ್ಗನೈಸ್ಡ್ ಕ್ರೈಮ್ ಆ್ಯಂಡ್ ಕರಪ್ಷನ್ ರಿಪೋರ್ಟಿಂಗ್ ಪ್ರಾಜೆಕ್ಟ್’ (ಒಸಿಸಿಆರ್‌ಪಿ) ದಾಖಲೆಗಳನ್ನು ಉಲ್ಲೇಖಿಸಿ ಲಂಡನ್ನಿನ ಫೈನಾನ್ಶಿಯಲ್ ಟೈಮ್ಸ್ ಪತ್ರಿಕೆಯು ವರದಿಯೊಂದನ್ನು ಪ್ರಕಟಿಸಿದೆ. ಅದಾನಿ ಸಮೂಹವು 2013ರಲ್ಲಿ ಕಳಪೆ ದರ್ಜೆಯ ಕಲ್ಲಿದ್ದಲನ್ನು ಹೆಚ್ಚಿನ ಮೌಲ್ಯದ ಕಲ್ಲಿದ್ದಲು ಎಂದು ಮಾರಾಟ ಮಾಡಿ ‘ವಂಚಿಸಿದೆ’ ಎಂದು ವರದಿಯು ಸೂಚ್ಯವಾಗಿ ಹೇಳಿದೆ.
ಪಳೆಯುಳಿಕೆ ಇಂಧನದ ಬಳಕೆಯನ್ನು ಮುಂದುವರಿಸುವುದರ ವಿರುದ್ಧ ತಾವು ಇರುವುದಾಗಿ ಹೇಳಿರುವ 21 ಸಂಘಟನೆಗಳು, ಫೈನಾನ್ಶಿಯಲ್ ಟೈಮ್ಸ್‌ನ ವರದಿಯು ಅದಾನಿ ಸಮೂಹವು ‘ಕಳಪೆ ದರ್ಜೆಯ ಕಲ್ಲಿದ್ದಲನ್ನು ದುಬಾರಿ ಬೆಲೆಯ ಪರಿಸರಕ್ಕೆ ಹೆಚ್ಚು ಹಾನಿ ಮಾಡದ ಇಂಧನ’ ಎಂಬಂತೆ ಮಾರಾಟ ಮಾಡಿರುವುದಕ್ಕೆ ಹೊಸದಾಗಿರುವ ಹಾಗೂ ವಿಸ್ತೃತವಾದ ಪುರಾವೆಯನ್ನು ಒದಗಿಸಿದೆ ಎಂದು ಹೇಳಿವೆ. ಅದಾನಿ ಸಮೂಹವು ತಮಿಳುನಾಡು ವಿದ್ಯುತ್ ಉತ್ಪಾದನೆ ಮತ್ತು ವಿತರಣಾ ನಿಗಮದ ಜೊತೆಗಿನ ವಹಿವಾಟಿನಲ್ಲಿ ಹೀಗೆ ಮಾಡಿದೆ ಎಂಬ ಆರೋಪ ಇದೆ.
ಅದಾನಿ ಸಮೂಹವು ಎಲ್ಲ ಆರೋಪಗಳನ್ನು ನಿರಾಕರಿಸಿದೆ. ಆದರೆ ವಿರೋಧ ಪಕ್ಷಗಳ ನಾಯಕರು ಈ ವರದಿಯನ್ನು ಉಲ್ಲೇಖಿಸಿ, ಆರೋಪಗಳ ಬಗ್ಗೆ ಸಂಸತ್ತಿನ ಜಂಟಿ ಸಮಿತಿಯಿಂದ (ಜೆಪಿಸಿ) ತನಿಖೆ ನಡೆಸಬೇಕು ಎಂದು ಒತ್ತಾಯಿಸಿವೆ.
2011ರಿಂದ 2015ರ ನಡುವೆ ಇಂಡೊನೇಷ್ಯಾದಿಂದ ಆಮದು ಮಾಡಿಕೊಂಡ ಕಲ್ಲಿದ್ದಲಿಗೆ ಅತಿಯಾಗಿ ಬೆಲೆ ನಿಗದಿ ಮಾಡಲಾಗಿದೆ ಎಂಬ ವಿಚಾರವಾಗಿ ರೆವಿನ್ಯು ಗುಪ್ತಚರ ನಿರ್ದೇಶನಾಲಯವು 2016ರ ಮಾರ್ಚ್‌ನಲ್ಲಿ ತನಿಖೆ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.