ಡೆಹ್ರಾಡೂನ್/ನವದೆಹಲಿ/ ಉತ್ತರಾಖಂಡ/ (ಪಿಟಿಐ, ಎಐಎನ್‌ಎಸ್): ಅಕ್ಷರಶಃ ಸ್ಮಶಾನದಂತಾಗಿರುವ ಉತ್ತರಾಖಂಡದಲ್ಲಿ ಸಂಕಷ್ಟದಲ್ಲಿರುವ ಜನರ ರಕ್ಷಣೆಗೆ ಭಾರತೀಯ ಸೇನೆ ಅವಿರತವಾಗಿ ಶ್ರಮಿಸುತ್ತಿದೆ. ಈವರೆಗೆ 60 ಸಾವಿರ ಜನರನ್ನು ರಕ್ಷಿಸಿದ್ದು, ಇನ್ನೂ 30 ಸಾವಿರ ಜನರನ್ನು ಸಂರಕ್ಷಿಸಬೇಕಿದೆ ಎಂದು ಗೃಹ ಸಚಿವಾಲಯದ ಮೂಲಗಳು ಶನಿವಾರ ತಿಳಿಸಿವೆ.
ಇದರ ಬೆನ್ನಲ್ಲೇ ಕೇದಾರನಾಥ, ಬದರಿನಾಥ ವ್ಯಾಪ್ತಿಯಲ್ಲಿ ಜೂನ್ 24ರ ನಂತರ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಇದರಿಂದ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಪಿಂಡಾರಿ ಗ್ಲಾಸಿರಿಯಾ ಪ್ರದೇಶದಲ್ಲಿ ಅಪಾಯದಲ್ಲಿ ಸಿಲುಕಿದ್ದ 45 ಮಕ್ಕಳು ಸೇರಿದಂತೆ ಈವರೆಗೆ 18 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸೇನಾ ಸಿಬ್ಬಂದಿ ಸ್ಥಳಾಂತರಿಸಿದೆ.
ಕೇದಾರನಾಥ, ಬದರಿನಾಥ ಪ್ರದೇಶದಲ್ಲಿ 9,500 ಜನ ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಇಂಡೋ-ಟಿಬೆಟ್‌ನ ಗಡಿ ಪೊಲೀಸ್‌ನ ವಕ್ತಾರ ದೀಪಕ್ ಕೆ. ಪಾಂಡೆ ತಿಳಿಸಿದ್ದಾರೆ.
8,500 ಸೇನಾ ಸಿಬ್ಬಂದಿ ಎಡೆಬಿಡದೆ ಕಾರ್ಯ ನಿರ್ವಹಿಸುತ್ತಿದ್ದು, ಗೌರಿಕುಂಡ, ಜೋಷಿಮಠ, ಬದರಿನಾಥ, ಕೇದಾರನಾಥ ಸೇರಿದಂತೆ ಇತರೆಡೆ ದುರ್ಗಮ ಸ್ಥಳದಲ್ಲಿದ್ದ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸೇನೆಯ ಕೇಂದ್ರ ಕಮಾಂಡ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅನಿಲ್ ಚೈಟ್ ತಿಳಿಸಿದ್ದಾರೆ.
ಗಂಗೋತ್ರಿ ಪ್ರದೇಶದಲ್ಲಿ 500 ಜನರನ್ನು, ರಕ್ಷಣೆ ಮಾಡಡಲಾಗಿದೆ. ಮಂಗಳ್ ಪಟ್ಟಿಯಲ್ಲಿ ಅಪಾಯದಲ್ಲಿ ಸಿಲುಕಿದ್ದ ಸಾವಿರ ಮಂದಿಯನ್ನು ಗುರಿ ಕುಂಡ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಸಂತ್ರಸ್ತರ ನೆರವಿಗೆ 19 ವೈದ್ಯಕೀಯ ಕೇಂದ್ರಗಳನ್ನು ತೆರೆಯಲಾಗಿದೆ. 40 ಸಾವಿರ ಚದರ ಕಿ.ಮೀ. ಬೆಟ್ಟ ಪ್ರದೇಶದಲ್ಲಿ ಮಳೆಯಿಂದ ಹಾನಿಯಾಗಿದೆ. 400 ಕಿ.ಮೀ. ರಸ್ತೆ ಹಾಳಾಗಿರುವುದರಿಂದ ಸಂಪರ್ಕ ಕಷ್ಟಸಾಧ್ಯವಾಗಿದೆ. ಕ್ಲಿಷ್ಟ ಪರಿಸ್ಥಿತಿಯಲ್ಲೂ ಸೇನಾ ಸಿಬ್ಬಂದಿ ರಸ್ತೆ ಸರಿಪಡಿಸುವ ಹಾಗೂ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸುವ ಮೂಲಕ ಯಾತ್ರಿಗಳ, ಸ್ಥಳೀಯ ನಿವಾಸಿಗಳ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.