ADVERTISEMENT

ನಾಂದೇಡ್ ಆಸ್ಪತ್ರೆ ದುರಂತ: 12 ನವಜಾತ ಶಿಶು ಸೇರಿ 24 ಜನರು 24 ತಾಸಿನಲ್ಲಿ ಸಾವು

ಪಿಟಿಐ
Published 2 ಅಕ್ಟೋಬರ್ 2023, 16:34 IST
Last Updated 2 ಅಕ್ಟೋಬರ್ 2023, 16:34 IST
ಸಾವು (ಪ್ರಾತಿನಿಧಿಕ ಚಿತ್ರ)
ಸಾವು (ಪ್ರಾತಿನಿಧಿಕ ಚಿತ್ರ)   

ಮುಂಬೈ: ಮಹಾರಾಷ್ಟ್ರದ ನಾಂದೇಡ್‌ನ ಸರ್ಕಾರಿ ಆಸ್ಪತ್ರೆಯಲ್ಲಿ 12 ನವಜಾತ ಶಿಶುಗಳು ಸೇರಿದಂತೆ 24 ಜನರು, 24 ತಾಸಿನಲ್ಲಿ ಮೃತಪಟ್ಟಿದ್ದಾರೆ.

ಮರಾಠವಾಡದ ಪ್ರಮುಖ ನಗರವಾದ ನಾಂದೇಡ್‌ನ ಡಾ.ಶಂಕರರಾವ್‌ ಚವಾಣ್‌ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಿಂದ ಈ ಆಘಾತಕಾರಿ ಘಟನೆ ನಡೆದಿದೆ ಎನ್ನಲಾಗಿದೆ.

‘ಒಂದು ದಿನದಿಂದ ನಾಲ್ಕು ದಿನದ ಒಳಗಿನ 12 ನವಜಾತ ಶಿಶುಗಳು ಮೃತಪಟ್ಟಿವೆ. ತಲಾ ಆರು ಮಂದಿ ಪುರುಷರು ಹಾಗೂ ಮಹಿಳೆಯರು ಕೂಡ ಸಾವಿಗೀಡಾಗಿದ್ದಾರೆ. ಇವರಲ್ಲಿ ಹಲವರು ಹಾವಿನ ಕಡಿತಕ್ಕೆ ಚಿಕಿತ್ಸೆ ಪಡೆಯಲು ಬಂದಿದ್ದರು’ ಎಂದು ನಾಂದೇಡ್‌ ಸರ್ಕಾರಿ ಆಸ್ಪತ್ರೆಯ ಡಾ.ಶ್ಯಾಮರಾವ್‌ ವಾಕೋಡೆ ತಿಳಿಸಿದ್ದಾರೆ.

ADVERTISEMENT

500 ರೋಗಿಗಳಿಗೆ ಚಿಕಿತ್ಸೆ ನೀಡುವಷ್ಟು ಸಾಮರ್ಥ್ಯವನ್ನು ಈ ಆಸ್ಪತ್ರೆ ಹೊಂದಿದೆ. ಆದರೆ, ಇಲ್ಲಿ 1,200ಕ್ಕೂ ಅಧಿಕ ರೋಗಿಗಳು ಇದ್ದಾರೆ.

ವಿರೋಧ ಪಕ್ಷಗಳ ಮೈತ್ರಿಕೂಟ ಮಹಾ ವಿಕಾಸ ಅಘಾಡಿ ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಒತ್ತಾಯಿಸಿದೆ. ಆರೋಗ್ಯ ಸಚಿವ ಡಾ.ತಾನಾಜಿ ಸಾವಂತ್ ವಿರುದ್ಧವೂ ವಾಗ್ದಾಳಿ ನಡೆಸಿದೆ.

‘ಇದೊಂದು ದುರದೃಷ್ಟಕರ ಘಟನೆ’ ಎಂದು ಶಿಂದೆ ಹೇಳಿದ್ದಾರೆ.

ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಶಿವಸೇನಾದ (ಯುಬಿಟಿ) ಉಪನಾಯಕಿ ಸುಷ್ಮಾ ಅಂಧಾರೆ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.