ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ (ಎಂಸಿಡಿ) ಆರು ಮಂದಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ಶುಕ್ರವಾರ ನಡೆದ ಚುನಾವಣೆಯಲ್ಲಿ 250 ಸದಸ್ಯರ ಪೈಕಿ 242 ಸದಸ್ಯರು ಮತದಾನ ಮಾಡಿದ್ದಾರೆ ಎಂದು ಮೇಯರ್ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.
ಎಂಟು ಮಂದಿ ಸದಸ್ಯರು ಮತದಾನ ಮಾಡಿಲ್ಲ ಎಂದು ಅವರು ವಿವರಿಸಿದ್ದಾರೆ.
ಸದಸ್ಯರಾದ ಮಂದೀಪ್ ಸಿಂಗ್, ಅರಿಬಾ ಖಾನ್, ನಾಜಿಯಾ ಡ್ಯಾನಿಶ್, ಸಮೀರ್ ಅಹಮ್ಮದ್, ಶಗುಫ್ತಾ ಚೌಧರಿ ಜುಬೇರ್, ಸಬಿಲಾ ಬೇಗಂ, ನಾಜಿಯಾ ಖಾತೂನ್ ಮತ್ತು ಜರೀಫ್ ಅವರು ಮತದಾನ ಮಾಡಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ದೆಹಲಿ ಹೈಕೋರ್ಟ್ ಮೊರೆ ಹೋದ ಬಿಜೆಪಿ ಸದಸ್ಯ:
ಎಂಸಿಡಿಯ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗಾಗಿ ಈಚೆಗೆ ನಡೆದಿದ್ದ ಮತದಾನದ ವೇಳೆ ಮೊಬೈಲ್ ಮತ್ತು ಪೆನ್ನುಗಳ ಬಳಕೆಗೆ ಅನುಮತಿ ನೀಡುವ ಮೂಲಕ ಮೇಯರ್ ಶೆಲ್ಲಿ ಒಬೆರಾಯ್ ಅವರು ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯ ಶರದ್ ಕಪೂರ್ ದೆಹಲಿ ಹೈಕೋರ್ಟ್‌ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ಸೋಮವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿ ಪುರುಷೇಂದ್ರ ಕುಮಾರ್ ಕೌರವ್ ಅವರು ಪಟ್ಟಿ ಮಾಡಿದ್ದಾರೆ.
ಫೆಬ್ರುವರಿ 22ರಂದು ನಡೆದಿರುವ ಚುನಾವಣೆಯನ್ನು ಅನೂರ್ಜಿತಗೊಳಿಸಬೇಕು ಎಂದೂ ಅರ್ಜಿದಾರರ ಪರ ವಕೀಲರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.