ಲಖನೌ: ದೇಶದಲ್ಲಿಯೇ ಅತಿ ಎತ್ತರದ ಅಂದರೆ 251 ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆಯನ್ನು 100 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ಸ್ಥಾಪಿಸಲು ಉತ್ತರ ಪ್ರದೇಶದ ಸರ್ಕಾರ ತೀರ್ಮಾನಿಸಿದೆ.
ಹಿರಿಯ ಅಧಿಕಾರಿಗಳ ಸಭೆಯ ಬಳಿಕ ಸೋಮವಾರ ಸುದ್ದಿಗಾರರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಈ ವಿಷಯ ತಿಳಿಸಿದರು. ‘ಧಾರ್ಮಿಕ ಹಿನ್ನೆಲೆಯ ಅಯೋಧ್ಯೆಯಲ್ಲಿ ಅತಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುವುದು’ ಎಂದರು.
‘ಪ್ರತಿಮೆಯನ್ನು ಸ್ಥಾಪಿಸುವುದರ ಜೊತೆಗೆ ಅಯೋಧ್ಯೆ ನಗರದ ಸಮಗ್ರ ಅಭಿವೃದ್ಧಿಗೂ ಯೋಜನೆ ರೂಪಿಸಬೇಕು. ಡಿಜಿಟಲ್ ಸಂಗ್ರಹಾಲಯ, ಮಾಹಿತಿ ಕೇಂದ್ರ, ಗ್ರಂಥಾಲಯ, ಪಾರ್ಕಿಂಗ್ ಸೌಲಭ್ಯ, ಫುಡ್ ಪ್ಲಾಜಾ, ಶ್ರೀರಾಮನ ಚಿಂತನೆ ಬಿಂಬಿಸುವ ಭೌಗೋಳಿಕ ವಿನ್ಯಾಸ ಇರುವಂತೆ ನೋಡಿಕೊಳ್ಳಬೇಕು’ ಎಂದು ಸೂಚಿಸಿದರು.
ಉತ್ತರ ಪ್ರದೇಶ ಸರ್ಕಾರ ಈ ಕುರಿತು ಅಧಿಕೃತ ಹೇಳಿಕೆಯನ್ನೂ ಬಿಡುಗಡೆ ಮಾಡಿದೆ. ಉದ್ದೇಶಿತ ಯೋಜನೆಯನ್ನು ಕಾರ್ಯಗತಗೊಳಿಸಲು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಟ್ರಸ್ಟ್ ಅನ್ನು ಸ್ಥಾಪಿಸಲಾಗುವುದು ಎಂದು ತಿಳಿಸಲಾಗಿದೆ.
ಪ್ರತಿಮೆ ಸ್ಥಾಪನೆ ಕುರಿತು ತಾಂತ್ರಿಕ ಸಹಕಾರ ಒದಗಿಸುವಂತೆ ಗುಜರಾತ್ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು. ಪೂರಕವಾಗಿ ರಾಜ್ಯದಲ್ಲಿ ಪ್ರತ್ಯೇಕವಾಗಿ ನಿಗಮ ಸ್ಥಾಪಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.