ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26 \11) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ 166 ಜನ ಮೃತಪಟ್ಟಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತ ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಸಂಚಲನ ಮೂಡಿಸಿತ್ತು.
ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಗುಂಪಿನ ಭಯೋತ್ಪಾದಕರು 2008ರ ನವೆಂಬರ್ 26ರಂದು ರಾತ್ರಿ ಮುಂಬೈ ನಗರವನ್ನು ಪ್ರವೇಶಿಸಿದ್ದರು. ಏಕಾಏಕಿ ನಡೆಸಿದ ಗುಂಡಿನಲ್ಲಿ ದಾಳಿಯಲ್ಲಿ ನಾಲ್ಕು ದಿನಗಳ ಅವಧಿಯಲ್ಲಿ 166 ಜನರು ಮೃತಪಟ್ಟು 300 ಜನರು ಗಾಯಗೊಂಡಿದ್ದರು.
ತಾಜ್ ಮತ್ತು ಒಬೆರಾಯ್ ಹೊಟೇಲ್‌ಗಳು, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ನಾರಿಮನ್ ಹೌಸ್‌ನಲ್ಲಿರುವ ಯಹೂದಿ ಕೇಂದ್ರ ಮತ್ತು ಲಿಯೋಪೋಲ್ಡ್ ಕೆಫೆ, ಈ ಸ್ಥಳಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಆಗಾಗ್ಗೆ ಭೇಟಿ ನೀಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಜನಸಂದಣಿ ಇರುವುದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಯೋಜಿತ ದಾಳಿ ನಡೆಸಲಾಗಿತ್ತು. ಐಷಾರಾಮಿ ಮಡಿಲಲ್ಲಿ ದುಃಸ್ವಪ್ನವಾದ ದಾಳಿಗೆ ನೂರಾರು ಅಮಾಯಕ ಜೀವಗಳು ಪ್ರಾಣತೆತ್ತವು.
ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್’ಗೆ 2010ರಲ್ಲಿ ಮರಣದಂಡನೆ ವಿಧಿಸಿ. 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು.
2008ರ ಈ ದುರಂತಕ್ಕೆ 15 ವರ್ಷಗಳು ಕಳೆದರೂ ಘಟನೆಯ ಭೀಕರತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನೂ ಜೀವಂತ. ಕಲಿತ ಪಾಠಗಳು ಜಾಗತಿಕ ಭದ್ರತೆಗೆ ನಿರ್ಣಾಯಕವಾಗಿವೆ.
ಈ ವರ್ಷ ದುರಂತ ಭಯೋತ್ಪಾದನಾ ದಾಳಿಯ 15 ನೇ ವಾರ್ಷಿಕೋತ್ಸವವನ್ನು ಗುರುತಿಸುವ ಮೂಲಕ, ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.