ಭುವನೇಶ್ವರ: ವಾಣಿಜ್ಯ ವಿಮಾನದ ಪೈಲಟ್ ಆದ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಒಡಿಶಾದ ಅನುಪ್ರಿಯಾ ಮಧುಮಿತಾ ಪಾತ್ರರಾಗಿದ್ದಾರೆ.
ಮಾವೋವಾದಿಗಳ ಭದ್ರಕೋಟೆ ಎನಿಸಿರುವ ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ 27 ವರ್ಷದ ಬುಡಕಟ್ಟು ಯುವತಿ ಪೈಲಟ್ ಆಗುವತಮ್ಮ ಬಾಲ್ಯದಕನಸು ನನಸಾಗಿಸಿಕೊಂಡಿದ್ದಾರೆ. ಪೊಲೀಸ್ ಕಾನ್‌ಸ್ಟೆಬಲ್ ಮಗಳಾದ ಅನುಪ್ರಿಯಾ ಇಂಡಿಗೊ ಏರ್‌ಲೈನ್ಸ್‌ನ ಸಹಪೈಲಟ್ ಆಗಿ ನೇಮಕಗೊಂಡಿದ್ದಾರೆ.
‘ನಮ್ಮ ಮಗಳು ಕುಟುಂಬಕ್ಕೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ’ ಎಂದು ತಾಯಿ ಜಿಮ್ಜಾ ಯಾಶ್ಮಿನ್ ಸಂತಸ ವ್ಯಕ್ತಪಡಿಸಿದ್ದಾರೆ.
‘ಪೈಲಟ್ ತರಬೇತಿಗೆ ಹಣ ಹೊಂದಿಸುವುದು ಕಷ್ಟವಾದರೂ, ಸಾಲ ಮಾಡಿ, ಸಂಬಂಧಿಕರ ಬಳಿ ಸಹಾಯ ಪಡೆದು ಮಗಳಿಗೆ ತರಬೇತಿ ಕೊಡಿಸಿದೆ. ಆಕೆ ಬಯಸಿದ ಕ್ಷೇತ್ರದಲ್ಲಿಯೇ ಶಿಕ್ಷಣ ಕೊಡಿಸಬೇಕು ಎನ್ನುವುದಷ್ಟೇ ನನ್ನ ಮನಸ್ಸಿನಲ್ಲಿತ್ತು. ಬಡತನವಿದ್ದರೂ ಮಗಳು ದೊಡ್ಡ ಕನಸು ಕಾಣುವುದಕ್ಕೆ ನಾವು ಎಂದೂ ಅಡ್ಡಿ ಮಾಡಲಿಲ್ಲ. ಆಕೆ ಏನು ಕನಸು ಕಂಡಿದ್ದಳೊ ಅದನ್ನೇ ಆಗಿದ್ದಾಳೆ ಎನ್ನುವ ಖುಷಿ ನಮಗಿದೆ. ಎಲ್ಲಾ ಹೆಣ್ಣುಮಕ್ಕಳಿಗೂ ನನ್ನ ಮಗಳು ಆದರ್ಶವಾಗಬೇಕು ಎನ್ನುವುದೇ ನನ್ನ ಆಸೆ. ಎಲ್ಲಾ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಒತ್ತಾಸೆಯಾಗಿ ನಿಲ್ಲಬೇಕು ಎಂದೇ ನಾನು ಕೋರುತ್ತೇನೆ’ ಎಂದು ಜಿಮ್ಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಯುವತಿಯ ಸಾಧನೆಯನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶ್ಲಾಘಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, ‘ಅನುಪ್ರಿಯಾ ಸಾಧನೆ ಬಗ್ಗೆ ಹೆಮ್ಮೆ ಇದೆ, ಖುಷಿ ಇದೆ. ಅನೇಕ ಹೆಣ್ಣುಮಕ್ಕಳಿಗೆ ಇವರು ಮಾದರಿಯಾಗಿದ್ದಾರೆ’ ಎಂದಿದ್ದಾರೆ.
ಬುಡಕಟ್ಟು ಮುಖಂಡ ಮತ್ತು ಒಡಿಶಾ ಆದಿವಾಸಿ ಕಲ್ಯಾಣ ಮಹಾಸಂಘದ ಅಧ್ಯಕ್ಷ ನಿರಂಜನ್ ಬಿಸಿ, ‘ಅನುಪ್ರಿಯಾ ಅವರು ಕೇವಲ ಮಲ್ಕನ್‌ಗಿರಿಗೆ ಅಲ್ಲ ಒಡಿಶಾದಲ್ಲಿಯೇ ಬುಡಕಟ್ಟು ಸಮುದಾಯದಲ್ಲಿ ಪೈಲಟ್ ಆದ ಮೊದಲ ಮಹಿಳೆ. ಮುಂದಿನ ದಿನಗಳಲ್ಲಿ ರೈಲ್ವೆ ವಿಭಾಗದಲ್ಲಿಯೂ ಸ್ಥಾನಪಡೆಯುವರು. ಸ್ಥಳೀಯ ಮಹಿಳೆಯೊಬ್ಬರು ವಿಮಾನ ಚಲಾಯಿಸುತ್ತಾರೆ ಎನ್ನುವುದು ಬುಡಕಟ್ಟು ಸಮುದಾಯಕ್ಕೆ ಹೆಮ್ಮೆಯ ವಿಚಾರ’ ಎಂದು ಹೇಳಿದರು.
ಶೋಭಾ ಕರಂದ್ಲಾಜೆ, ಮುರಳಿಧರ್ ರಾವ್, ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿ, ಈ ಯುವತಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.