ADVERTISEMENT

ಭರೂಚ್‌: ಅಪಾಯಕಾರಿಮಟ್ಟ ಮೀರಿ ಹರಿಯುತ್ತಿರುವ ನರ್ಮದಾ

ಪಿಟಿಐ
Published 27 ಆಗಸ್ಟ್ 2024, 15:50 IST
Last Updated 27 ಆಗಸ್ಟ್ 2024, 15:50 IST
<div class="paragraphs"><p>ನರ್ಮದಾ ನದಿ (ಪ್ರಾತಿನಿಧಿಕ ಚಿತ್ರ)</p></div>

ನರ್ಮದಾ ನದಿ (ಪ್ರಾತಿನಿಧಿಕ ಚಿತ್ರ)

   

ಭರೂಚ್‌: ನರ್ಮದಾ ನದಿಯು ಮಂಗಳವಾರ ಅಪಾಯಕಾರಿ ಮಟ್ಟವನ್ನೂ ಮೀರಿ ಹರಿಯುತ್ತಿರುವುದರಿಂದ ಗುಜರಾತ್‌ನ ಭರೂಚ್‌ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನರ್ಮದಾ ನದಿಗೆ ಮಧ್ಯಪ್ರದೇಶದಲ್ಲಿ ಕಟ್ಟಿರುವ ಓಂಕಾರೇಶ್ವರ ಅಣೆಕಟ್ಟಿನಿಂದ ನಿರಂತರವಾಗಿ ಒಳಹರಿವು ಏರಿಕೆಯಾಗುತ್ತಿರುವುದೇ ಇದಕ್ಕೆ ಕಾರಣ.

ಗುಜರಾತ್‌ನ ಗೋಲ್ಡನ್‌ ಬ್ರಿಡ್ಜ್‌ ಬಳಿ ಅಪಾಯಕಾರಿ ಮಟ್ಟವನ್ನು (24 ಅಡಿ) ಮೀರಿ 27 ಅಡಿ ಮಟ್ಟದಲ್ಲಿ ನದಿ ಹರಿಯುತ್ತಿದೆ. ‘ನದಿ ಪಾತ್ರದ 27 ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ತುಷಾರ್‌ ಸುಮೇರಾ ತಿಳಿಸಿದರು.

‘ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ಭರೂಚ್‌ ನಗರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಸುಮಾರು 280 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರ ಪರಿಸ್ಥಿತಿಯು ನಿಯಂತ್ರಣದಲ್ಲಿ ಇದ್ದಿದ್ದರಿಂದ ಜನರನ್ನು ಸ್ಥಳಾಂತರಿಸುವ ಕಾರ್ಯ ಕೈಗೊಂಡಿಲ್ಲ’ ಎಂದರು.

‘ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ಸರ್ದಾರ್‌ ಸರೋವರ್‌ ಅಣೆಕಟ್ಟಿನ 30 ಗೇಟ್‌ಗಳ ಪೈಕಿ 23 ಗೇಟ್‌ಗಳನ್ನು ಸೋಮವಾರ ತೆರೆಯಲಾಗಿತ್ತು. ಇದಕ್ಕಾಗಿಯೂ ಭರೂಚ್‌ ನಗರದ ಬಳಿಯಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಈಗ 8 ಗೇಟ್‌ಗಳನ್ನು ಮುಚ್ಚಲಾಗಿದೆ. ಇದರಿಂದಾಗಿ ನೀರಿನ ಒಳಹರಿವು ತಗ್ಗಿದೆ’ ಎಂದು ನರ್ಮದಾ ಜಿಲ್ಲಾಧಿಕಾರಿ ಎಸ್‌.ಕೆ. ಮೋದಿ ಮಾಹಿತಿ ನೀಡಿದರು.

‘ಈ ಅಣೆಕಟ್ಟಿನ ನೀರಿನ ಸಂಗ್ರಹ ಸಾಮರ್ಥ್ಯವು 138.68 ಮೀಟರ್‌ ಇದೆ. ಸದ್ಯ ಅಣೆಕಟ್ಟಿನಲ್ಲಿ 134 ಮೀಟರ್‌ ನೀರಿನ ಸಂಗ್ರಹ ಇದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.