ADVERTISEMENT

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2.88 ಕೋಟಿ ಲಸಿಕೆ ಡೋಸ್ ಲಭ್ಯ

ಪಿಟಿಐ
Published 21 ಜುಲೈ 2021, 11:49 IST
Last Updated 21 ಜುಲೈ 2021, 11:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸದ್ಯ 2.88 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

ಈವರೆಗೆ ಎಲ್ಲಾ ಮೂಲಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 43.25 ಕೋಟಿ (43,25,17,330) ಲಸಿಕೆ ಡೋಸ್‌ಗಳನ್ನು ಒದಗಿಸಲಾಗಿದೆ ಮತ್ತು ಇನ್ನೂ 53,38,210 ಡೋಸ್‌ಗಳು ತಲುಪಲಿವೆ. ಈ ಪೈಕಿ ವ್ಯರ್ಥವಾಗಿರುವುದು ಸೇರಿದಂತೆ ಒಟ್ಟು 40,36,44,231 ಡೋಸ್‌ಗಳನ್ನು ಬಳಸಲಾಗಿದೆ ಎಂದು ಸಚಿವಾಲಯ ಬುಧವಾರ ಬೆಳಿಗ್ಗೆ 8 ಗಂಟೆಗೆ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖಿಸಿದೆ.

2.88 ಕೋಟಿಗೂ ಹೆಚ್ಚು (2,88,73,099) ಕೋವಿಡ್-19 ಲಸಿಕೆ ಡೋಸ್‌ಗಳು ಇನ್ನೂ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿವೆ ಎಂದು ಅದು ಹೇಳಿದೆ.

ADVERTISEMENT

ದೇಶದಾದ್ಯಂತ ಕೋವಿಡ್-19 ಲಸಿಕಾ ಅಭಿಯಾನಕ್ಕೆ ವೇಗ ಹೆಚ್ಚಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಚಿವಾಲಯ ತಿಳಿಸಿದೆ. ಕೋವಿಡ್-19 ವ್ಯಾಕ್ಸಿನೇಷನ್‌ನ ಸಾರ್ವತ್ರಿಕೀಕರಣದ ಹೊಸ ಹಂತವು 2021ರ ಜೂನ್ 21 ರಂದು ಪ್ರಾರಂಭವಾಯಿತು.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕೆ ಪೂರೈಕೆ ಸರಪಳಿಯನ್ನು ಸುಗಮಗೊಳಿಸುವ ಯೋಜನೆ ಮೂಲಕ ಲಸಿಕಾ ಅಭಿಯಾನವನ್ನು ಹೆಚ್ಚಿಸಲಾಗಿದೆ. ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಚಾಲನೆಯ ಭಾಗವಾಗಿ, ಕೇಂದ್ರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಗಳನ್ನು ಉಚಿತವಾಗಿ ನೀಡುವ ಮೂಲಕ ಬೆಂಬಲಿಸುತ್ತಿದೆ.

ದೇಶದಲ್ಲಿ ಲಸಿಕೆ ತಯಾರಕರು ಉತ್ಪಾದಿಸುವ 75 ಪ್ರತಿಶತ ಲಸಿಕೆಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವು ಪೂರೈಸುತ್ತಿದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.