ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳಿರುವ ರಾಜ್ಯದ 290 ಯಾತ್ರಾರ್ಥಿಗಳು ನೇಪಾಳದ ಸಿಮಿಕೋಟ್ ಎಂಬಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಮಧ್ಯೆ ಸಿಲುಕಿಕೊಂಡಿದ್ದಾರೆ. ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ನೆರವು ನೀಡುವಂತೆ ನೇಪಾಳದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ರಾಜ್ಯ ಸರ್ಕಾರ ಮನವಿ ಮಾಡಿಕೊಂಡಿದೆ.
ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್ ಬಡೇರಿಯಾ ಅವರು ಕೇಂದ್ರ ಗೃಹ ಸಚಿವಾಲಯದ ಸಂಪರ್ಕದಲ್ಲಿದ್ದು, ಪ್ರವಾಸಿಗರಿಗೆ ಅಗತ್ಯ ವೈದ್ಯಕೀಯ ಸೌಲಭ್ಯವನ್ನು ಒದಗಿಸಲು ಪ್ರಯತ್ನ ಮಾಡುತ್ತಿದ್ದಾರೆ.
ಸಿಮಿಕೋಟ್‌ನಿಂದ ಯಾತ್ರಾರ್ಥಿಗಳೆಲ್ಲ ನೇಪಾಳ ಗಂಜ್‌ಗೆ ಬರಬೇಕಿದ್ದು, ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಮಳೆಯಲ್ಲಿ ಸಿಲುಕಿಕೊಂಡವರನ್ನು ಕರೆತರುವ ಪ್ರಕ್ರಿಯೆ ಕೂಡ ವಿಳಂಬವಾಗಿದೆ. ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ. ಆದರೆ, ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾತ್ರಾರ್ಥಿಗಳು ಪ್ರಕೃತಿ ವಿಕೋಪದ ಮಧ್ಯೆ ಸಿಲುಕಿಕೊಂಡಿರುವ ಕುರಿತು ರಾಜ್ಯ ಕಂದಾಯ ಇಲಾಖೆ (ನೈಸರ್ಗಿಕ ವಿಕೋಪ ಉಸ್ತುವಾರಿ ವಿಭಾಗ) ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಮೈಸೂರು ವರದಿ: ‘ಅಪಾಯದಲ್ಲಿ ಸಿಲುಕಿರುವವರ ಪೈಕಿ ಮೈಸೂರಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆತಂಕಗೊಂಡ ಹಲವರು ಅಸ್ವಸ್ಥಗೊಂಡಿದ್ದಾರೆ. ಸೂಕ್ತ ವೈದ್ಯಕೀಯ ಚಿಕಿತ್ಸೆಯೂ ಲಭ್ಯವಿಲ್ಲ. ಸಮೀಪದ ಮನೆಯವರು ಮೂರು ದಿನಗಳಿಂದ ಅಲ್ಪಸ್ವಲ್ಪ ಆಹಾರ ನೀಡುತ್ತಿದ್ದಾರೆ. ನಮ್ಮನ್ನು ಕರೆದುಕೊಂಡು ಬಂದಿರುವ ಪ್ರವಾಸಿ ಸಂಸ್ಥೆಯವರೂ ಸಂಪರ್ಕಿಸಿಲ್ಲ’ ಎಂದು ಅಪಾಯದಲ್ಲಿ ಸಿಲುಕಿದ ಯಾತ್ರಾರ್ಥಿಯೊಬ್ಬರು ‘ಪ‍್ರಜಾವಾಣಿ’ಗೆ ತಿಳಿಸಿದ್ದಾರೆ.
‘ಈ ಬಗ್ಗೆ ಮಾಹಿತಿ ಸೋಮವಾರ ರಾತ್ರಿ ಬಂದಿದೆ. ಹೆಚ್ಚಿನ ಮಾಹಿತಿಗೆ ಬಂಧುಗಳು ದೂರವಾಣಿ ಸಂಖ್ಯೆ 918022340676 ಅಥವಾ ಟೋಲ್ ಫ್ರೀ ಸಂಖ್ಯೆ 91801070 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.