ADVERTISEMENT

ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ: ಭದ್ರತೆಗೆ 2 ಸಾವಿರ ಸಿಬ್ಬಂದಿ ನಿಯೋಜನೆ

ಪಿಟಿಐ
Published 29 ಮೇ 2024, 9:43 IST
Last Updated 29 ಮೇ 2024, 9:43 IST
<div class="paragraphs"><p>ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ</p></div>

ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ ಸಂಗ್ರಹ ಚಿತ್ರ

ಕನ್ಯಾಕುಮಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ವಾಸ್ತವ್ಯಕ್ಕೆ ಇಲ್ಲಿನ ವಿವೇಕಾನಂದ ಸ್ಮಾರಕವು ಸಕಲ ರೀತಿಯಲ್ಲಿ ಸಜ್ಜಾಗಿದೆ. ಸ್ಮಾರಕದ ಸುತ್ತ ಬಿಗಿ ಭದ್ರತೆ ಇರಲಿದೆ. ಇದಕ್ಕಾಗಿ ಕನ್ಯಾಕುಮಾರಿಯಲ್ಲಿ ಎರಡು ಸಾವಿರ ಮಂದಿ ಪೊಲೀಸ್ ಸಿಬ್ಬಂದಿ, ವಿವಿಧ ಭದ್ರತಾ ಸಂಸ್ಥೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.

ADVERTISEMENT

ಮೋದಿ ಅವರು ಇಲ್ಲಿ ಧ್ಯಾನಕ್ಕೆ ಕೂರಲಿದ್ದಾರೆ. 2019ರ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯಗಳು ಕೊನೆಗೊಂಡ ನಂತರ ಮೋದಿ ಅವರು ಕೇದಾರನಾಥದ ರುದ್ರ ಗುಹೆಯಲ್ಲಿ ಧ್ಯಾನ ಮಾಡಿದ್ದರು.

ಈ ಬಾರಿ ಮೋದಿ ಅವರು ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರದ ಅವಧಿ ಮುಗಿದ ನಂತರ, ಮೇ 30ರ ಸಂಜೆಯಿಂದ ಜೂನ್‌ 1ರ ಸಂಜೆಯವರೆಗೆ ವಿವೇಕಾನಂದ ಸ್ಮಾರಕದ ‘ಧ್ಯಾನ ಮಂಟಪ’ದಲ್ಲಿ ಧ್ಯಾನ ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ತಿರುನಲ್ವೇಲಿಯ ವಲಯ ಡಿಐಜಿ ಪ್ರವೇಶ್ ಕುಮಾರ್ ಅವರು ಎಸ್‌ಪಿ ಇ. ಸುಂದರವದನಂ ಅವರ ಜೊತೆ ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದ್ದಾರೆ. ಪ್ರಧಾನಿಯವರ ಭದ್ರತಾ ತಂಡವು ಸ್ಥಳವನ್ನು ಈಗಾಗಲೇ ತಲುಪಿದೆ. ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಹೆಲಿಕಾಪ್ಟರ್‌ ಇಳಿಸುವುದರ ತಾಲೀಮು ನಡೆಸಲಾಗಿದೆ.

ಕನ್ಯಾಕುಮಾರಿಯಲ್ಲಿ ಹಾಗೂ ಅದರ ಸುತ್ತಮುತ್ತ ಒಟ್ಟು ಎರಡು ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ.

ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಮೋದಿ ಅವರು ಗುರುವಾರ ಮಧ್ಯಾಹ್ನದ ನಂತರ ಕನ್ಯಾಕುಮಾರಿ ತಲುಪಲಿದ್ದಾರೆ. ನಂತರ ಅವರು ವಿವೇಕಾನಂದ ಸ್ಮಾರಕಕ್ಕೆ ತೆರಳಲಿದ್ದಾರೆ. ಅವರು ಜೂನ್‌ 1ರ ಮಧ್ಯಾಹ್ನ 3 ಗಂಟೆಯವರೆಗೆ ಅಲ್ಲಿಯೇ ಇರುವ ನಿರೀಕ್ಷೆ ಇದೆ. ಜೂನ್ 1ರಂದು ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ನಡೆಯಲಿದೆ.

ಪ್ರಧಾನಿಯವರು ವಿವೇಕಾನಂದ ಸ್ಮಾರಕದಲ್ಲಿ 45 ಗಂಟೆಗಳ ಕಾಲ ವಾಸ್ತವ್ಯ ಹೂಡಲಿರುವ ಕಾರಣ ಕರಾವಳಿ ಕಾವಲು ಪಡೆ ಮತ್ತು ಭಾರತೀಯ ನೌಕಾದಳವು ಸಮುದ್ರ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲಿವೆ ಎಂದು ಮೂಲಗಳು ಹೇಳಿವೆ.

ದೂರು: ಮಮತಾ ಎಚ್ಚರಿಕೆ

ಬಾರೂಇಪುರ: ಪ್ರಧಾನಿ ನರೇಂದ್ರ ಮೋದಿ ಅವರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡುವುದು ಸುದ್ದಿ ವಾಹಿನಿಗಳಲ್ಲಿ ಪ್ರಸಾರಗೊಂಡಲ್ಲಿ ಆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಹೇಳಿದ್ದಾರೆ.

‘ಅವರು ಧ್ಯಾನ ಮಾಡಬಹುದು. ಆದರೆ ಸುದ್ದಿ ವಾಹಿನಿಗಳು ಅದನ್ನು ಪ್ರದರ್ಶಿಸುವಂತೆ ಇಲ್ಲ’ ಎಂದು ಬ್ಯಾನರ್ಜಿ ಅವರು ಹೇಳಿದ್ದಾರೆ. ಅದನ್ನು ವಾಹಿನಿಗಳು ಪ್ರದರ್ಶಿಸುವುದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದಿದ್ದಾರೆ.

‘ಧ್ಯಾನ ಮಾಡಲಿಕ್ಕೆ ಯಾರಾದರೂ ಕ್ಯಾಮೆರಾಗಳನ್ನು ಒಯ್ಯುವ ಅಗತ್ಯ ಇದೆಯೇ’ ಎಂದು ಮಮತಾ ಪ್ರಶ್ನಿಸಿದ್ದಾರೆ. ಇದು ಬಹಿರಂಗ ಪ್ರಚಾರ ಕೊನೆಗೊಂಡ ನಂತರ, ಮತದಾನ ಆರಂಭವಾಗುವವರೆಗಿನ ಅವಧಿಯಲ್ಲಿಯೂ ಪ್ರಚಾರ ನಡೆಸುವ ಒಂದು ಬಗೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.