ADVERTISEMENT

‘ಸುಳ್ಳು ಕಥೆ ಸಾಬೀತಾಗಲಿಲ್ಲ...’ –ಗುಜರಾತ್‌ ಪೊಲೀಸರಿಂದ 3 ನಕಲಿ ಎನ್‌ಕೌಂಟರ್‌

9 ಮಂದಿ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ತನಿಖಾ ಸಮಿತಿ ಶಿಫಾರಸು

ಏಜೆನ್ಸೀಸ್
Published 12 ಜನವರಿ 2019, 9:26 IST
Last Updated 12 ಜನವರಿ 2019, 9:26 IST
ಎನ್‌ಕೌಂಟರ್ ಆದ ವ್ಯಕ್ತಿಗಳು– ಸಾಂದರ್ಭಿಕ ಚಿತ್ರ
ಎನ್‌ಕೌಂಟರ್ ಆದ ವ್ಯಕ್ತಿಗಳು– ಸಾಂದರ್ಭಿಕ ಚಿತ್ರ   

ನವದೆಹಲಿ: 2002 ರಿಂದ 2006ರ ನಡುವೆ ಗುಜರಾತ್‌ನಲ್ಲಿ ನಡೆದಿರುವ ಎನ್‌ಕೌಂಟರ್‌ ಪ್ರಕರಣ ತನಿಖೆ ನಡೆಸಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ ಸಮಿತಿಯು, ತನಿಖೆ ಕೈಗೊಂಡಿರುವ 17 ಪ್ರಕರಣಗಳ ಪೈಕಿ ಮೂರು ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಬೇಡಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವಅಂತಿಮ ವರದಿಯಲ್ಲಿ– ಸಮೀರ್‌ ಖಾನ್‌, ಕಾಸಮ್‌ ಕಾಫರ್‌ ಹಾಗೂ ಹಜಿ ಹಜಿ ಇಸ್ಮಾಯಿಲ್‌ ಹೆಸರಿನ ಮೂರು ಮಂದಿಯನ್ನು ಗುಜರಾತ್‌ ಪೊಲೀಸರು ನಕಲಿ ಎನ್‌ಕೌಂಟರ್‌ಗಳಲ್ಲಿ ಹತ್ಯೆ ಮಾಡಿದ್ದಾರೆ ಎಂದಿದೆ. ಈ ಪ್ರಕರಣಗಳಲ್ಲಿ ಮೂವರು ಇನ್‌ಸ್ಪೆಕ್ಟರ್‌ ದರ್ಜೆಯ ಅಧಿಕಾರಿಗಳು ಸೇರಿ ಒಟ್ಟು ಒಂಬತ್ತು ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಿದೆ.

ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ

ನಕಲಿ ಎನ್‌ಕೌಂಟರ್‌ ಪ್ರಕರಣಗಳಲ್ಲಿ ಯಾವುದೇ ಐಪಿಎಸ್‌ ಅಧಿಕಾರಿಯ ಹೆಸರು ಪ್ರಸ್ತಾಪವಾಗಿಲ್ಲ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎಸ್‌.ಬೇಡಿ ಅವರ ನೇತೃತ್ವದಲ್ಲಿ ಕೋರ್ಟ್‌ ಸಮಿತಿ ರೂಪಿಸಿ ಗುಜರಾತ್‌ನಲ್ಲಿನ 17 ಎನ್‌ಕೌಂಟರ್‌ ಪ್ರಕರಣಗಳ ತನಿಖೆ ನಡೆಸುವಂತೆ ಸೂಚಿಸಿತ್ತು. 2002–2006ರ ನಡುವೆ ನಡೆದಿರುವ ಎನ್‌ಕೌಂಟರ್‌ಗಳ ತನಿಖೆ ನಡೆಸಿ, ನಕಲಿ ಪ್ರಕರಣಗಳನ್ನು ಪತ್ತೆ ಮಾಡಿ, ವಿವರವಾದ ವರದಿಯನ್ನು ಸಮಿತಿಯು ಕಳೆದ ವರ್ಷ ಫೆಬ್ರುವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ADVERTISEMENT

ಅಂತಿಮ ವರದಿಯ ಗೌಪ್ಯತೆ ಕಾಯ್ದುಕೊಳ್ಳುವಂತೆ ಗುಜರಾತ್‌ ಸರ್ಕಾರ ಸಲ್ಲಿಸಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠವು ಇದೇ ಜ.9ರಂದು ತಿರಸ್ಕರಿಸಿದೆ. ಕವಿ, ಸಾಹಿತಿ ಜಾವೆದ್‌ ಅಕ್ತರ್‌ ಸೇರಿದಂತೆ ಅರ್ಜಿದಾರರಿಗೆ ಸಮಿತಿ ವರದಿಯ ಪ್ರತಿಯನ್ನು ನೀಡುವಂತೆ ಕೋರ್ಟ್ ಆದೇಶಿಸಿದೆ.

ನರೇಂದ್ರ ಮೋದಿ ಹತ್ಯೆಗೆ ಸೂಚನೆ!

ಸಮೀರ್‌ ಖಾನ್‌ ಪ್ರಕರಣದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಕೆ.ಎಂ.ವಘೇಲ ಮತ್ತು ಟಿ.ಎ.ಬಾರೊಟ್‌ ವಿರುದ್ಧ ಕಾನೂನು ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ. ಕೊಲೆ ಹಾಗೂ ಅದಕ್ಕೆ ಸಂಬಂಧಿಸಿದ ಕೃತ್ಯಗಳ ಆರೋಪವಿದೆ. ಪೊಲೀಸರ ಪ್ರಕಾರ, 1996ರ ಮೇನಲ್ಲಿ ಸಮೀರ್‌ ಖಾನ್‌ ಮತ್ತು ಆತನ ಸೋದರ ಸಂಬಂಧಿ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ಚುಚ್ಚಿದ್ದಾನೆ. ಕಾನ್‌ಸ್ಟೆಬಲ್‌ ಸ್ಥಳದಲ್ಲೇ ಮೃತಪಟ್ಟಿದ್ದು, ಸಮೀರ್‌ ಸೋದರ ಸಂಬಂಧಿಯನ್ನು ಬಂಧಿಸಲಾಗಿತ್ತು. ಆದರೆ, ಸಮೀರ್‌ ಸ್ಥಳದಿಂದ ಓಡಿ ಹೋಗಿದ್ದ.

ಆತ ಪಾಕಿಸ್ತಾನಕ್ಕೆ ಪರಾರಿಯಾಗಿ, ಉಗ್ರ ಸಂಘಟನೆ ಜೈಷ್‌–ಇ–ಮೊಹಮ್ಮದ್‌(ಜೆಮ್‌)ನಿಂದ ತರಬೇತಿ ಪಡೆದು ನೇಪಾಳದ ಮೂಲಕ ಭಾರತಕ್ಕೆ ವಾಪಸಾಗಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ. 2002ರಲ್ಲಿ ಅಕ್ಷರಧಾಮ ಮಂದಿರದ ಮೇಲೆ ದಾಳಿಯ ನಂತರ ಪಾಕಿಸ್ತಾನ ಮೂಲಕ ಜೆಮ್‌ ಉಗ್ರ ಸಂಘಟನೆ ಆತನಿಗೆ ಅಹಮದಾಬಾದ್‌ಗೆ ತೆರಳಲು ಸೂಚಿಸಿತ್ತು. ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಹತ್ಯೆ ನಡೆಸುವಂತೆ ಸೂಚನೆ ನೀಡಿತ್ತು ಎಂದು ಆರೋಪಿಸಿದೆ.

ಹಣ ಪಡೆದು ದೇಶದ ವಿರುದ್ಧದ ಚಟುವಟಿಕೆಗಳನ್ನು ನಡೆಸುತ್ತಿರುವ ಆರೋಪದ ಮೇಲೆ ಕ್ರೈಂ ಬ್ರ್ಯಾಂಚ್‌ ಪೊಲೀಸರು ಸಮೀರ್ ಖಾನ್‌ನನ್ನು ಬಂಧಿಸಿದ್ದರು. 1996ರಲ್ಲಿ ಕಾನ್‌ಸ್ಟೆಬಲ್‌ ಹತ್ಯೆ ನಡೆದಿದ್ದ ಸ್ಥಳಕ್ಕೆ ಆತನನ್ನು ಕರೆತಂದ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್‌ ವಘೇಲ ಅವರ ರಿವಾಲ್ವರ್‌ ಕಸಿದು, ಅವರ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಓಡಿದ್ದ. ಅದೇ ಸಮಯದಲ್ಲಿ ಮತ್ತಿಬ್ಬರು ಇನ್‌ಸ್ಪೆಕ್ಟರ್‌ಗಳಾದ ತರುಣ್‌ ಬಾರೊಟ್‌ ಮತ್ತು ಎ.ಎ.ಚೌಹಾಣ್, ಸಮೀರ್‌ ಮೇಲೆ ಗುಂಡು ಹಾರಿಸಿದ್ದರು. ಬಳಿಕ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಾದರೂ ಮೃತಪಟ್ಟಿರುವುದಾಗಿ ಘೋಷಿಸಲಾಯಿತು ಎಂದು ಪೊಲೀಸರು ವರದಿ ನೀಡಿದ್ದರು. ಆದರೆ, ತನಿಖೆ ನಡೆಸಿರುವ ಸಮಿತಿಯು ಇದೊಂದು ನಕಲಿ ಎನ್‌ಕೌಂಟರ್‌ ಎಂದು ವರದಿಯಲ್ಲಿ ಹೇಳಿದ್ದಾರೆ.

ವೈದ್ಯಕೀಯ ಹಾಗೂ ಇತರೆ ವರದಿಗಳನ್ನು ಆಧರಿಸಿ, ಸಮಿತಿಯು ’ಅಧಿಕಾರಿಗಳು ಆತನ ಸಮೀಪವೇ ಇದ್ದರು. ಬಹುಶಃ ಆತ ನೆಲೆದ ಮೇಲೆ ಕುಳಿತು, ಪ್ರಾಣ ಭಯದಿಂದ ಕಣ್ಣೀರಿಡುತ್ತಿದ್ದ’ ಎಂದಿದೆ. ಇನ್‌ಸ್ಪೆಕ್ಟರ್‌ ಚೌಹಾಣ್‌ ಈಗಾಗಲೇ ಮೃತಪಟ್ಟಿದ್ದು ಅವರ ವಿರುದ್ಧ ಕ್ರಮಕೈಗೊಳ್ಳುವುದು ಸಾಧ್ಯವಿರುವುದಿಲ್ಲ. ಸಮೀರ್‌ ಖಾನ್‌ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡುವಂತೆಯೂ ಸಮಿತಿ ವರದಿಯಲ್ಲಿ ಪ್ರಸ್ತಾಪಿಸಿದೆ.

ಸುಳ್ಳು ಕಥೆ ಸಾಬೀತಾಗಲಿಲ್ಲ...

ಅಹಮದಾಬಾದ್‌ನ ಹೊಟೇಲ್‌ವೊಂದಿಂದ ಕಾಸಿಮ್‌ ಜಾಫರ್‌ನನ್ನು ಇತರೆ 17 ಮಂದಿಯೊಂದಿಗೆ 2006ರ ಏಪ್ರಿಲ್‌, 13ರಂದು ಪೊಲೀಸರು ಕರೆದೊಯ್ದಿದ್ದರು. ಪೊಲೀಸ್‌ ಠಾಣೆಗೆ ಕರೆತರುವ ಮಾರ್ಗದಲ್ಲಿ ಕಾಸಿಮ್‌ ತಪ್ಪಿಸಿಕೊಂಡಿದ್ದ. ಒಂದು ದಿನದ ಬಳಿಕ ಸೇತುವೆಯ ಅಡಿಯಲ್ಲಿ ಆತನ ಶವ ಪತ್ತೆಯಾಗಿತ್ತು ಎಂದು ಪೊಲೀಸರು ವರದಿ ಮಾಡಿದ್ದರು. ಆದರೆ, ಕಾಸಿಮ್‌ ಮತ್ತು ಆತನ ಸಹಚರರು ಕ್ರಿಮಿನಲ್‌ ಕಾರ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ಸೂಕ್ತ ಸಾಕ್ಷ್ಯಗಳನ್ನು ಪೂರೈಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ 2006ರ ಏ.13ರಂದು ರಾಯಲ್‌ ಹೊಟೇಲ್‌ನಿಂದ ಕಾಸಿಮ್‌ನನ್ನು ಪೊಲೀಸರು ವಶಕ್ಕೆ ಪಡೆದದ್ದು ನಿಜವೆಂದು ಸಾಬೀತಾಗಿಲ್ಲ ಎಂದು ಸಮಿತಿಯ ವರದಿ ಹೇಳಿದೆ.

ಪೊಲೀಸರು– ಸಾಂದರ್ಭಿಕ ಚಿತ್ರ

ಸಬ್‌–ಇನ್‌ಸ್ಪೆಕ್ಟರ್‌ ಜೆ.ಎಂ.ಭಾರ್ವಾಡ್‌ ಮತ್ತು ಕಾನ್‌ಸ್ಟೆಬಲ್‌ ಗಣೇಶ್‌ಭಾಯ್‌ ಹತ್ಯೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿದ್ದು, ಕೊಲೆ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸುವಂತೆ ವರದಿಯಲ್ಲಿ ಪ್ರಸ್ತಾಪಿಸಿದೆ. ಪ್ರಕರಣದಲ್ಲಿ ಸಾವಿಗೀಡಾದ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳಿಗೆ ₹14 ಲಕ್ಷ ಪರಿಹಾರ ನೀಡಬೇಕೆಂದೂ ವರದಿ ಹಿಂದಿನ ಆದೇಶದಲ್ಲಿ ಹೇಳಿದೆ.

ವಶದಲ್ಲಿರುವಾಗಲೇ ಗುಂಡು ಹಾರಿಸಿ ಹತ್ಯೆ?

2005ರ ಅಕ್ಟೋಬರ್‌ 9; ಕುಖ್ಯಾತ ಕಳ್ಳಸಾಗಣೆಗಾರ ಹಜಿ ಹಜಿ ಇಸ್ಮಾಯಿಲ್‌ ಮಾರುತಿ ಜೆನ್‌ ಕಾರಿನಲ್ಲಿ ತನ್ನ ಸ್ಥಳಕ್ಕೆ ತೆರಳುತ್ತಿರುವ ಮಾಹಿತಿ ಪೊಲೀಸರಿಗೆ ದೊರೆಯುತ್ತದೆ. ಆತನನ್ನು ಹಿಡಿಯಲು ಪೊಲೀಸರು ಕಾರು ಅಡ್ಡಗಟ್ಟಿ ನಿಲ್ಲುತ್ತಾರೆ. ಕಾರಿನಿಂದ ಹೊರಬಂದ ಇಸ್ಮಾಯಿಲ್‌ ಪೊಲೀಸರತ್ತ ಗುಂಡು ಹಾರಿಸುತ್ತಾನೆ. ರಕ್ಷಣೆಗಾಗಿ ಪೊಲೀಸರು ಆತನ ಮೇಲೆ 20 ಸುತ್ತು ಗುಂಡಿನ ಮಳೆಗರೆಯುತ್ತಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಆತ ಸಾವಿಗೀಡಾಗುತ್ತಾನೆ.– ಇದು ಪೊಲೀಸರು ನೀಡಿದ ವರದಿ.

ಶವಪರೀಕ್ಷೆ ವರದಿಯನ್ನು ಗಮನಿಸುವ ಸಮಿತಿ, ಆತನ ದೇಹದ ಮೇಲೆ ಆದ 6 ಗಾಯಗಳ ಪೈಕಿ ಐದು ಗಾಯಗಳು ದೇಹದ ಆಳಕ್ಕೆ ಹೊಕ್ಕಿರುವುದು ಆಗಿರುತ್ತವೆ. ಅಂದರೆ, ಅತ್ಯಂತ ಸಮೀಪದಿಂದಲೇ ಆತನ ಮೇಲೆ ಗುಂಡು ಹಾರಿಸಲಾಗಿದೆ ಎಂದು ಸಮಿತಿ ಮನಗಂಡಿದೆ. ಎರಡು ಅಡಿ ಅಥವಾ ಅದಕ್ಕಿಂತಲೂ ಸಮೀಪದಿಂದಲೇ ಇಸ್ಮಾಯಿಲ್‌ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ, ವಶದಲ್ಲಿರುವಾಗಲೇ ಆತನ ಹತ್ಯೆ ನಡೆದಿದೆ ಎಂದು ಸಮಿತಿ ನಿರ್ಧಾರ ತೆಗೆದುಕೊಂಡಿದೆ. ಪೊಲೀಸರ ಪ್ರಕಾರ , ಸುಮಾರು 15–20 ಅಡಿ ದೂರದಲ್ಲಿ ಪೊಲೀಸರು ಮತ್ತು ಇಸ್ಮಾಯಿಲ್‌ ನಡುವೆ ಗುಂಡಿನ ಚಕಮಕಿ ನಡೆದಿದೆ.

ಈ ಪ್ರಕರಣದ ಸಂಬಂಧ ಇನ್‌ಸ್ಪೆಕ್ಟರ್‌ ಕೆ.ಜಿ.ಎರ್ಡ, ಸಬ್‌–ಇನ್‌ಸ್ಪೆಕ್ಟರ್‌ಗಳಾದ ಎಲ್‌.ಬಿ.ಮೊನಪಾರಾ, ಜೆ.ಎಂ.ಯಾದವ್‌, ಎಸ್‌.ಕೆ.ಷಾಹ್‌ ಹಾಗೂ‍ಪ್ರಾಗ್‌ ಪಿ ವ್ಯಾಸ್‌ ಸೇರಿದಂತೆ ಒಟ್ಟು ಐವರು ಪೊಲೀಸರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಮಿತಿ ಶಿಫಾರಸು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.