ಮುಂಬೈ: ಮುಂಬೈನಲ್ಲಿ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾರಾಯಣ ಹೆಡ್ಕೆ ವಠಾರದ ಬಳಿ ಬುಧವಾರ ಭೂಕುಸಿತ ಸಂಭವಿಸಿದ್ದು, ಮೂರು ಮಂದಿ ಗಾಯಗೊಂಡಿದ್ದಾರೆ. ಅಲ್ಲದೇ ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಬೃಹನ್ ಮುಂಬೈ ಪಾಲಿಕೆಯ ಅಧಿಕಾರಿಗಳು ತಿಳಿಸಿದರು.
‘ಗಾಯಗೊಂಡವರನ್ನು ಸಿಯಾನ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮೂರು ಕೊಠಡಿಗಳು ಹಾನಿಗೊಳಗಾಗಿವೆ.ಮುನ್ನೆಚ್ಚರಿಕೆಯ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ಅವರು ಹೇಳಿದರು.
ಮುಂಬೈನಲ್ಲಿ ಮುಂದಿನ 24 ಗಂಟೆಗಳಲ್ಲಿ ವಿಪರೀತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
‘24 ಗಂಟೆಗಳಲ್ಲಿ ದಕ್ಷಿಣ ಮುಂಬೈನಲ್ಲಿ ಸರಾಸರಿ 107 ಮಿಮೀ ಮಳೆಯಾದರೆ, ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಕ್ರಮವಾಗಿ 172 ಮಿಮೀ ಮತ್ತು 152 ಮಿಮೀ ಮಳೆಯಾಗಿದೆ’ ಎಂದು ಪೌರಾಡಳಿತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ತರಾಖಂಡದಲ್ಲಿ ಭೂಕುಸಿತ: ಗ್ರಾಮ ಮುಖ್ಯಸ್ಥ ಸಾವು
ಡೆಹ್ರಾಡೂನ್: ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ತಾಟೋರ್ ಗ್ರಾಮಕ್ಕೆ ಹೊಸದಾಗಿ ಗ್ರಾಮ ಪ್ರಧಾನರಾಗಿ ಆಯ್ಕೆಯಾದ ವ್ಯಕ್ತಿಯೊಬ್ಬರು ಪ್ರಮಾಣವಚನ ಸ್ವೀಕರಿಸಲು ತೆರಳುತ್ತಿದ್ದಾಗ ಮೃತಪಟ್ಟಿದ್ದಾರೆ. ಹಾಗೂ ಜೊತೆಗಿದ್ದ ಮೂವರು ಗಾಯಗೊಂಡಿದ್ದಾರೆ.
ಗ್ರಾಮದ ಮುಖ್ಯಸ್ಥ ಪ್ರತಾಪ್ ಸಿಂಗ್ (50) ಸಾವೀಗೀಡಾದವರು. ಪ್ರತಾಪ್ ಸಿಂಗ್ ಹಾಗೂ ಅವರ ಕುಟುಂಬ ಥಟ್ಯೂಡ್‌ಗೆ ಹೋಗುತ್ತಿದ್ದಾಗ ಅವರ ಕಾರಿನ ಮೇಲೆ ಜೌನ್‌ಪುರ ಬ್ಲಾಕ್ ಬಳಿ ಬಂಡೆಯೊಂದು ಬಿದ್ದಿದೆ. ಘಟನೆಯಲ್ಲಿ ಪ್ರತಾಪ್ ಅವರು ಮೃತಪಟ್ಟಿದ್ದಾರೆ ಎಂದು ನ್ಯೂ ತೆಹ್ರಿಯ ಅಧಿಕಾರಿಗಳು ತಿಳಿಸಿದ್ದಾರೆ.
‘ರಾಜ್ಯದ ಇತರ ಭಾಗಗಳಲ್ಲಿ ಕೂಡ ಭೂಕುಸಿತಗಳು ವರದಿಯಾಗಿದ್ದು, ರುದ್ರಪ್ರಯಾಗ ಜಿಲ್ಲೆಯ ಸಿರೋಬಗಢ ಬಳಿ ಬದರಿನಾಥ ಹೆದ್ದಾರಿಯು ಮುಚ್ಚಿಹೋಗಿದೆ‘ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಗೆ ಅಡ್ಡಿಯಾಗಿರುವ ಅವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ಬದರಿನಾಥ ಮಾರ್ಗದ ಸಂಚಾರವನ್ನು ಬದಲಾಯಿಸಲಾಗಿದೆ ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ಪರಿಹಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.