ADVERTISEMENT

ಸಿಜೆಐ ರಂಜನ್ ಗೊಗೊಯಿ ವಿರುದ್ಧದ ಆರೋಪ: ವಿಚಾರಣೆಗೆ ತ್ರಿಸದಸ್ಯ ಸಮಿತಿ

ಲೈಂಗಿಕ ಕಿರುಕುಳ ಪ್ರಕರಣ * ಶುಕ್ರವಾರ ವಿಚಾರಣೆ

ಪಿಟಿಐ
Published 24 ಏಪ್ರಿಲ್ 2019, 3:55 IST
Last Updated 24 ಏಪ್ರಿಲ್ 2019, 3:55 IST
ರಂಜನ್ ಗೊಗೊಯಿ
ರಂಜನ್ ಗೊಗೊಯಿ   

ನವದೆಹಲಿ:ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ ನೇತೃತ್ವದ ತ್ರಿಸದಸ್ಯ ಸಮಿತಿ ವಿಚಾರಣೆ ನಡೆಸಲಿದೆ.

ಹಿರಿತನದ ಆಧಾರದಲ್ಲಿ ಗೊಗೊಯಿ ಅವರಗಿಂತ ನಂತರದ ಸ್ಥಾನದಲ್ಲಿರುವಬೊಬ್ಡೆ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆಗೆ ತಮ್ಮನ್ನು ನೇಮಕ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ, ನ್ಯಾಯಮೂರ್ತಿ ಎನ್‌.ವಿ.ರಮಣ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನು ವಿಚಾರಣೆ ನಡೆಸುವ ಸಮಿತಿಯಲ್ಲಿ ಸೇರಿಸಿಕೊಳ್ಳುವುದಾಗಿಯೂ ಗೊಗೊಯಿ ವಿರುದ್ಧ ಆರೋಪ ಮಾಡಿರುವ ಮಹಿಳೆಗೆ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದೂ ಹೇಳಿದ್ದಾರೆ.

ಪ್ರಕರಣದ ಮೊದಲ ವಿಚಾರಣೆ ಶುಕ್ರವಾರ ನಡೆಯಲಿದೆ.

ADVERTISEMENT

ಪ್ರಕರಣದ ವಿಚಾರಣೆ ಮುಗಿಸಲು ಗಡುವು ನಿಗದಿಪಡಿಸಲಾಗಿಲ್ಲ. ಆರಂಭಿಕ ವಿಚಾರಣೆಯಿಂದ ಏನು ತಿಳಿದುಬರಲಿದೆ ಎಂಬುದರ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುದು ಎಂದುಬೊಬ್ಡೆ ತಿಳಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಸ್ವತಃಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ತ್ರಿಸದಸ್ಯ ಪೀಠ ಕಳೆದ ಶನಿವಾರ ವಿಚಾರಣೆ ನಡೆಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.

ತಮ್ಮ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪವನ್ನು ರಂಜನ್‌ ಗೊಗೊಯಿ ಅವರು ನಿರ್ವಹಿಸಿದ ರೀತಿ ‘ಅನುಚಿತ’ ಮತ್ತು ‘ಯಥೋಚಿತ ಪ್ರಕ್ರಿಯೆಗಳ ಉಲ್ಲಂಘನೆ’ ಎಂದು ಸುಪ್ರೀಂ ಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಮತ್ತು ಸುಪ್ರೀಂ ಕೋರ್ಟ್‌ ಅಡ್ವೊಕೇಟ್ಸ್‌ ಆನ್‌ರೆಕಾರ್ಡ್‌ ಅಸೋಷಿಯೇಷನ್‌ (ಎಸ್‌ಸಿಎಒಆರ್‌ಎ) ಹೇಳಿದ್ದವು. ಅಲ್ಲದೆ,ಇಂತಹ ಆರೋಪಗಳ ಸಂದರ್ಭದಲ್ಲಿ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸುಪ್ರೀಂ ಕೋರ್ಟ್‌ ನಿರ್ಧಾರ ಕೈಗೊಳ್ಳಬೇಕು ಎಂದೂ ಈ ಸಂಘಟನೆಗಳು ಅಭಿಪ್ರಾಯಪಟ್ಟಿದ್ದವು.

ಪ್ರಕರಣಕ್ಕೆ ಸಂಬಂಧಿಸಿ ಸ್ವತಂತ್ರ ತನಿಖೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಹಾಗೂ ಲೇಖಕರು ಕೂಡ ಆಗ್ರಹಿಸಿದ್ದಾರೆ.

‘ರಂಜನ್ ಗೊಗೊಯಿ ಅವರು ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ’ ಎಂದು ಸುಪ್ರೀಂ ಕೋರ್ಟ್‌ನ ಮಾಜಿ ಸಿಬ್ಬಂದಿಯೊಬ್ಬರು ಇತ್ತೀಚೆಗೆ ಆರೋಪಿಸಿದ್ದರು. ಆರೋಪಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ನ 22 ನ್ಯಾಯಮೂರ್ತಿಗಳಿಗೆ ಏಪ್ರಿಲ್ 19ರಂದು ಪತ್ರ ಬರೆದಿದ್ದರು.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.