ಮುಜಾಫರನಗರ: ಪ್ರೇಮ ವಿವಾಹ ಸಂಬಂಧ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಮೂವರು ಯುವಕರು ಕೊಲೆಯಾಗಿ, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಮುಜಾಫರನಗರದಲ್ಲಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಫುಲತ್ ಎನ್ನುವ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂಘರ್ಷದಲ್ಲಿ ಭಾಗಿಯಾಗಿದ್ದ ಉಭಯ ಗುಂಪುಗಳು ಒಂದೇ ಜಾತಿಗೆ ಸೇರಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಕಿತ್ (25) ಹಾಗೂ ರೋಹಿತ್ (29) ಗಲಾಟೆಯಲ್ಲಿ ಮೃತಪಟ್ಟರೆ, ಹರಿಮೋಹನ್ (48) ಹಾಗೂ ರಾಹುಲ್ (27) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೋಹಿತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಕುಟುಂಬದ ಇಚ್ಛೆಗೆ ವಿರುದ್ಧವಾಗಿ ಹರಿಮೋಹನ್‌ನ ಪುತ್ರಿಯನ್ನು ಅಂಕಿತ್ ವಿವಾಹವಾಗಿದ್ದರು. ಮಂಗಳವಾರ, ಅಂಕಿತ್ ಮತ್ತು ಹರಿಮೋಹನ್ ನಡುವಿನ ವಾಗ್ವಾದ ಹಿಂಸಾಚಾರಕ್ಕೆ ತಿರುಗಿತ್ತು. ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರಿಂದ ಸಾವು–ನೋವು ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಸಂಬಂಧ ರಾಜು, ಮೋನು ಹಾಗೂ ಗೋವರ್ಧನ್ ಎಂಬವರ ಮೇಲೆ ದೂರು ದಾಖಲಾಗಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ.
ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಭಿಷೇಕ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.