ಜಮ್ಮು: ಇಲ್ಲಿನ ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋನ್ ಮೂಲಕ ಇರಿಸಲಾಗಿದ್ದ 3 ಸ್ಫೋಟಕಗಳನ್ನು (ಮ್ಯಾಗ್ನೆಟಿಕ್ ಐಇಡಿ) ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಖನೂರ್ ಸೆಕ್ಟರ್‌ನ ಕನಚಕ್‌ನ ಕಂಟೊವಾಲ–ದಯಾರನ್ ಪ್ರದೇಶದಲ್ಲಿ ಟೈಮರ್ ಸೆಟ್ ಮಾಡಿದ್ದ ಸ್ಫೋಟಕಗಳು ಮಕ್ಕಳ ಟಿಫಿನ್ ಬಾಕ್ಸ್‌ಗಳಲ್ಲಿ ಮಂಗಳವಾರ ಪತ್ತೆಯಾಗಿದ್ದವು ಎಂದು ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಜಮ್ಮು ಜಿಲ್ಲೆಯ ಭಾರತ–ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸದ್ದು ಕೇಳಿಸಿತ್ತು. ಡ್ರೋನ್ ಇರಬಹುದೆಂದು ಶಂಕಿಸಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ತಕ್ಷಣವೇ ಗುಂಡಿನ ದಾಳಿ ನಡೆಸಿದ್ದರು. ಕೂಡಲೇ ಆ ಪ್ರದೇಶವನ್ನು ಸುತ್ತುವರಿದು ಡ್ರೋನ್ ನಿರೋಧಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಡ್ರೋನ್ ಹಾರಾಟ ಗಮನಿಸಿದ್ದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.
ಏಳು ಮ್ಯಾಗ್ನೆಟಿಕ್ ಬಾಂಬ್‌ಗಳು, ಏಳು ಯುಬಿಜಿಎಲ್ (ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್) ಗ್ರೆನೇಡ್‌ಗಳನ್ನು ಹೊತ್ತ ಪಾಕಿಸ್ತಾನದ ಡ್ರೋನ್ ಅನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಮೇ 29ರಂದು ಪೊಲೀಸರು ಹೊಡೆದುರುಳಿಸಿದ್ದರು. ಕಳೆದ ತಿಂಗಳು ಹಲವು ಬಾರಿ ಪಾಕಿಸ್ತಾನದ ಡ್ರೋನ್‌ಗಳು ಭಾರತದ ಗಡಿಯೊಳಕ್ಕೆ ನುಸುಳಲು ವಿಫಲ ಯತ್ನ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.