ನವದೆಹಲಿ: ದೆಹಲಿಯ ಮುಖರ್ಜಿನಗರದಲ್ಲಿ ಪೊಲೀಸರು ಮತ್ತು ಟಿಂಪೊ ಚಾಲಕನ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಶನಿವಾರ ರಾತ್ರಿ ನಡೆದ ಜಗಳವೊಂದು ವಿವಾದ ಸೃಷ್ಟಿಸಿದೆ.
ಪೊಲೀಸರು ಮತ್ತು ಚಾಲಕನ ನಡುವೆ ನಡೆದ ಈ ಜಗಳದ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಪ್ರಕರಣಕ್ಕೆ ರಾಜಕೀಯ ಬಣ್ಣವೂ ಬಂದಿದೆ. ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಟೆಂಪೊ ಚಾಲಕ ಖಡ್ಗವನ್ನು ಝಳಪಿಸುತ್ತ ಪೊಲೀಸರನ್ನು ಬೆನ್ನಟ್ಟುತ್ತಿರುವ ದೃಶ್ಯವಿದ್ದರೆ, ಇನ್ನೊಂದು ವಿಡಿಯೊದಲ್ಲಿ ಪೊಲೀಸರು ಚಾಲಕನನ್ನು ಥಳಿಸುತ್ತಿರುವ ದೃಶ್ಯಗಳಿವೆ. ಘಟನೆಯಲ್ಲಿ ಪೊಲೀಸ್ ಒಬ್ಬರು ಗಾಯಗೊಂಡಿದ್ದಾರೆ.
‘ಗ್ರಾಮೀಣ ಸೇವಾ’ ಟೆಂಪೊ ಹಾಗೂ ಪೊಲೀಸ್ ವಾಹನದ ನಡುವೆ ಭಾನುವಾರ ಸಂಜೆ ಸಣ್ಣ ಅಪಘಾತ ಸಂಭವಿಸಿತ್ತು. ಈ ಕಾರಣಕ್ಕೆ ಪೊಲೀಸರು ಮತ್ತು ಟೆಂಪೊ ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದು, ಕೊನೆಗೆ ಅದು ಕೈಕೈ ಮಿಲಾಯಿಸುವ ಹಂತಕ್ಕೆ ಬಂದಿದೆ. ಈ ಸಂದರ್ಭದಲ್ಲಿ ಟೆಂಪೊ ಚಾಲಕ ಪೊಲೀಸ್ ಒಬ್ಬರ ತಲೆಗೆ ಹೊಡೆದಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಶಿರೋಮಣಿ ಅಕಾಲಿದಳದ ಸದಸ್ಯರೂ ಆಗಿರುವ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಅವರು, ‘ಚಾಲಕನ ಪಗಡಿ (ಟರ್ಬನ್) ಮೇಲೆ ದಾಳಿ ಮಾಡುವ ಮೂಲಕ ಪೊಲೀಸರು ಅವರನ್ನು ಅಪಮಾನಿಸಿದ್ದಾರೆ’ ಎಂಬ ಹೇಳಿಕೆ ನೀಡಿದ್ದಲ್ಲೆ ಹಲ್ಲೆ ನಡೆಸಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಮುಖರ್ಜಿನಗರ ಪೊಲೀಸ್ ಠಾಣೆಯ ಹೊರಗೆ ತಡರಾತ್ರಿಯವರೆಗೂ ಪ್ರತಿಭಟನೆ ನಡೆಸಿದರು. ಇದರಿಂದ ಘಟನೆ ರಾಜಕೀಯ ತಿರುವು ಪಡೆದುಕೊಂಡಿತು.
ಕ್ರಮಕ್ಕೆ ಕೇಜ್ರಿವಾಲ್ ಒತ್ತಾಯ: ‘ಘಟನೆಯ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ನಾಗರಿಕರಿಗೆ ರಕ್ಷಣೆ ಒದಗಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗೃಹ ಸಚಿವ ಅಮಿತ್ ಶಾ ಹಾಗೂ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್ ಅವರನ್ನು ಒತ್ತಾಯಿಸಿದ್ದಾರೆ.
ಕೇಜ್ರಿವಾಲ್ ಅವರು ಸೋಮವಾರ ಹಲ್ಲೆಗೊಳಗಾದ ಚಾಲಕನ ಮನೆಯವರನ್ನು ಭೇಟಿಮಾಡಿ ಸಾಂತ್ವನ ಹೇಳಿದ್ದಾರೆ.
ಚಾಲಕನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಒತ್ತಾಯಿಸಿದ್ದಾರೆ.
ಮೂವರ ಅಮಾನತು: ‘ಪ್ರಕರಣವನ್ನು ‘ವೃತ್ತಿಪರವಾಗಿ ನಿರ್ವಹಿಸದ’ ಕಾರಣಕ್ಕೆ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಸಿಪಿ ವೈಜಯಂತ್ ಆರ್ಯ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.