ADVERTISEMENT

ಸಂಸತ್‌ ಭವನ ರಕ್ಷಣೆ CISF ಹೆಗಲಿಗೆ: 3,317 ಯೋಧರ ನಿಯೋಜನೆ

ಪಿಟಿಐ
Published 19 ಮೇ 2024, 16:18 IST
Last Updated 19 ಮೇ 2024, 16:18 IST
ಸಿಐಎಸ್‌ಎಫ್‌ ಸಿಬ್ಬಂದಿ– ಪಿಟಿಐ ಚಿತ್ರ
ಸಿಐಎಸ್‌ಎಫ್‌ ಸಿಬ್ಬಂದಿ– ಪಿಟಿಐ ಚಿತ್ರ   

ನವದೆಹಲಿ: ಸಂಸತ್‌ ಭವನದ ಸಂಪೂರ್ಣ ಭದ್ರತೆಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸೋಮವಾರದಿಂದ ವಹಿಸಿಕೊಂಡಿದೆ. 

ಇನ್ನು ಮುಂದೆ ಸಂಸತ್‌ ಭವನದ ಸಂಕೀರ್ಣದಲ್ಲಿ ಭಯೋತ್ಪಾದನೆ ಚಟುವಟಿಕೆ ನಿಗ್ರಹ ಮತ್ತು ವಿಧ್ವಂಸಕ ಕೃತ್ಯಗಳನ್ನು ಹತ್ತಿಕ್ಕುವ ಜವಾಬ್ದಾರಿಯನ್ನು ಸಿಐಎಸ್‌ಎಫ್‌ನ 3,300ಕ್ಕೂ ಹೆಚ್ಚು ಸೈನಿಕರು ನಿಭಾಯಿಸಲಿದ್ದಾರೆ. ಇದುವರೆಗೆ ಸಂಸತ್‌ ಭವನದ ಭದ್ರತೆಯ ಹೊಣೆ ಹೊತ್ತಿದ್ದ ಕೇಂದ್ರ ಮೀಸಲು ರಕ್ಷಣಾ ಪಡೆ (ಸಿಆರ್‌ಪಿಎಫ್‌) ತನ್ನ 1,400 ಯೋಧರನ್ನು ಹಿಂಪಡೆದಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಿಆರ್‌ಪಿಎಫ್‌ನ ಸಂಸತ್‌ ಕರ್ತವ್ಯ ಗುಂಪು (ಪಿಡಿಜಿ) ತನ್ನ ವಾಹನಗಳು, ಶಸ್ತ್ರಾಸ್ತ್ರಗಳು ಮತ್ತು ಕಮಾಂಡೊಗಳನ್ನು ಸ್ಥಳದಿಂದ ತೆರವುಗೊಳಿಸಿದೆ. ಸಂಸತ್‌ ಭವನದ ಸಂಕೀರ್ಣದಲ್ಲಿ ತೆರೆದಿದ್ದ ಎಲ್ಲ ಭದ್ರತಾ ಕೇಂದ್ರಗಳನ್ನು ಸಿಐಎಸ್‌ಎಫ್‌ ತಂಡಕ್ಕೆ ಶುಕ್ರವಾರವೇ ಹಸ್ತಾಂತರ ಮಾಡಿದೆ. ಸಂಸತ್‌ ಭವನದಿಂದ ನಿರ್ಗಮಿಸಿದ ಸಿಆರ್‌ಪಿಎಫ್‌ ಸಿಬ್ಬಂದಿ ನೆನಪಿಗಾಗಿ ಮೊಬೈಲ್‌ಗಳಲ್ಲಿ ಸೆಲ್ಫಿ ಮತ್ತು ಪೋಟೋಗಳನ್ನು ಕ್ಲಿಕ್ಕಿಸಿಕೊಂಡರು ಎಂದು ಮೂಲಗಳು ಹೇಳಿವೆ.

ADVERTISEMENT

ಸಿಐಎಸ್‌ಎಫ್‌ನ 3,317 ಸಿಬ್ಬಂದಿ, ಸಂಸತ್‌ನ ಹಳೆಯ ಹಾಗೂ ಹೊಸ ಭವನದ ಜೊತೆಗೆ ಅದಕ್ಕೆ ಸಂಬಂಧಿಸಿದ ಕಟ್ಟಡಗಳ ಭದ್ರತೆಯನ್ನು ನೋಡಿಕೊಳ್ಳಲಿದ್ದಾರೆ. ಕಳೆದ ವರ್ಷದ ಡಿಸೆಂಬರ್‌ 13ರಂದು ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ನಂತರ ಕೇಂದ್ರ ಸರ್ಕಾರ, ಸಂಸತ್‌ ಭವನದ ಸಂಕೀರ್ಣದ ಹೊಣೆಯನ್ನು ವಹಿಸಿಕೊಳ್ಳುವಂತೆ ಸಿಆರ್‌ಪಿಎಫ್‌ಗೆ ನಿರ್ದೇಶಿಸಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ‘ಪಿಟಿಐ’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಸಿಐಎಸ್‌ಎಫ್‌ನ ಭಯೋತ್ಪಾದನಾ ನಿಗ್ರಹ ದಳ ಸೋಮವಾರ ಮುಂಜಾನೆ 6 ಗಂಟೆಯಿಂದ ಸಂಸತ್‌ನ ಭದ್ರತೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದೆ’ ಎಂದು ಅವರು ತಿಳಿಸಿದ್ದಾರೆ.

‘ನೋಂದಣಿ ದ್ವಾರಗಳು ಸೇರಿದಂತೆ ಕಟ್ಟಡದ ವಿವಿಧ ಭಾಗಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗಿದೆ. ಪಾಸ್‌ ವಿಭಾಗ ಹೊರತುಪಡಿಸಿ ಶ್ವಾನದಳ, ಅಗ್ನಿಶಾಮಕ ಸಿಬ್ಬಂದಿ, ಸಿಸಿಟಿವಿ ಕ್ಯಾಮೆರಾ ಕೊಠಡಿ, ಸಂಪರ್ಕ ಕೇಂದ್ರ, ವೀಕ್ಷಣಾ ಗೋಪುರಗಳಲ್ಲಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’

ಸಿಐಎಸ್‌ಎಫ್‌ ಸಿಬ್ಬಂದಿಯನ್ನು ‘ಆಂತರಿಕ ಭದ್ರತಾ ಕರ್ತವ್ಯ ಮಾದರಿಯಲ್ಲಿ ತಾತ್ಕಾಲಿಕವಾಗಿ ನಿಯೋಜಿಸಲಾಗಿದೆ. ಚುನಾವಣೆಯ ನಂತರ ಹೊಸ ಸರ್ಕಾರದಿಂದ ಇದಕ್ಕೆ ಪೂರ್ಣ ಪ್ರಮಾಣದ ಅನುಮತಿ ದೊರೆಯಲಿದೆ ಎಂದು ಮೂಲಗಳು ತಿಳಿಸಿವೆ.

ವ್ಯಕ್ತಿಗತ ತಪಾಸಣೆ, ಬ್ಯಾಗ್‌ ತಪಾಸಣೆ, ಬಾಂಬ್‌ ಪರಿಶೋಧನೆ ಹಾಗೂ ನಿಷ್ಕ್ರಿಯಗೊಳಿಸುವಿಕೆ ಸೇರಿದಂತೆ ಇತರ ತರಬೇತಿಗಳನ್ನು ಸಿಐಎಸ್‌ಎಫ್‌ ಸಿಬ್ಬಂದಿಗೆ ನೀಡಲಾಗಿದೆ  ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.