ADVERTISEMENT

ಕಾರ್ಮಿಕರನ್ನು ವಾಪಸ್ ಕರೆ ತನ್ನಿ: ಸಿ.ಎಂ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 15:49 IST
Last Updated 14 ಅಕ್ಟೋಬರ್ 2023, 15:49 IST

ಭುವನೇಶ್ವರ (ಪಿಟಿಐ): ಒಡಿಶಾದ ಕೇಂದ್ರಾಪಡಾ ಜಿಲ್ಲೆಯ ರಾಜಕನಿಕಾ ಬ್ಲಾಕ್‌ನ 35 ಕಾರ್ಮಿಕರ ಗುಂಪೊಂದು ತಾವು ಕೆಲಸ ಮಾಡುತ್ತಿದ್ದ ಲಾವೋಸ್‌ನ ಕಂಪನಿಯೊಂದರಲ್ಲೇ ಸೆರೆಯಾಳಾಗಿದೆ. ಸಂಕಷ್ಟದಲ್ಲಿ ಸಿಲುಕಿರುವ ತಮ್ಮನ್ನು ತುರ್ತಾಗಿ ವಾಪಸ್‌ ಕರೆಸಿಕೊಳ್ಳುವಂತೆ ತಮ್ಮ ಹಳ್ಳಿಗರಿಗೆ ವಿಡಿಯೊ ತುಣುಕೊಂದನ್ನು ಕಳಿಸಿಕೊಡುವ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.

ತಾವು ಕೆಲಸ ಮಾಡುತ್ತಿದ್ದ ಪ್ಲೈವುಡ್‌ ಕಂಪನಿ ಒಂದೂವರೆ ತಿಂಗಳ ಹಿಂದೆಯೇ ತನ್ನ ಕೆಲಸ ಸ್ಥಗಿತಗೊಳಿಸಿದೆ. ನಮ್ಮ ಪಾಸ್‌‍ಪೋರ್ಟ್‌ಗಳನ್ನು ಬಲವಂತವಾಗಿ ಕಿತ್ತಿಟ್ಟುಕೊಂಡಿರುವುದರ ಜೊತೆಗೆ ಸಂಬಳವನ್ನು ಇನ್ನೂ ಪಾವತಿಸಿಲ್ಲದಿರುವುದರಿಂದ, ನಮಗೆ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎಂದು ಕಾರ್ಮಿಕರು ವಿಡಿಯೊದಲ್ಲಿ ತಿಳಿಸಿದ್ದಾರೆ.

‘ನಮ್ಮ ಬಳಿ ಆಹಾರವೂ ಇಲ್ಲ, ಹಣವೂ ಇಲ್ಲ. ಊರಿಗೆ ಮರಳಲು ಅನುಮತಿಯನ್ನು ನೀಡುತ್ತಿಲ್ಲ’ ಎಂದು ಆಗ್ನೇಯ ಏಷ್ಯಾದ ದೇಶದಲ್ಲಿ ಸೆರೆಯಾಳಾಗಿರುವ ಕಾರ್ಮಿಕರ ಗುಂಪಿನಲ್ಲಿರುವ ಸರೋಜ್ ಪಾಲೈ ಎಂಬುವರು ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ವಿಷಯ ತಿಳಿದೊಡನೆ, ವಾಪಸ್‌ ಕರೆಸಿಕೊಳ್ಳಲು ಅವಶ್ಯವಿರುವ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕಾರ್ಮಿಕ ಇಲಾಖೆಯ ಆಯುಕ್ತರು ಲಾವೋಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಡನೆ ಸಂವಹನ ನಡೆಸಿದ್ದು, ಕಾರ್ಮಿಕರನ್ನು ಭಾರತಕ್ಕೆ ಮರಳಿ ಕಳಿಸಿಕೊಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಯಭಾರ ಕಚೇರಿ ತಿಳಿಸಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.