ADVERTISEMENT

350ಕ್ಕೂ ಹೆಚ್ಚು ಜನಪ್ರತಿನಿಧಿಗಳಿಗೆ ಕ್ರಿಮಿನಲ್‌ ಹಿನ್ನೆಲೆ: ಎಡಿಆರ್‌ ವರದಿ

ಕೆಲವರ ವಿರುದ್ಧ 31 ವರ್ಷದಿಂದ ಪ್ರಕರಣ ಬಾಕಿ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2021, 11:19 IST
Last Updated 23 ಆಗಸ್ಟ್ 2021, 11:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಂಸದರು, ಶಾಸಕರು ಸೇರಿದಂತೆ ದೇಶದಲ್ಲಿ 2019–2021ರ ಅವಧಿಯಲ್ಲಿ 350ಕ್ಕೂ ಅಧಿಕ ಜನಪ್ರತಿನಿಧಿಗಳಿಗೆ ಕ್ರಿಮಿನಲ್‌ ಹಿನ್ನೆಲೆಯಿದೆ. ಪಟ್ಟಿಯಲ್ಲಿ ಬಿಜೆಪಿ ಅಗ್ರಸ್ಥಾನದಲ್ಲಿದ್ದು, ಪಕ್ಷದ 83 ಮಂದಿ ಇದ್ದಾರೆ.

ಇವರಲ್ಲಿ 24 ಸಂಸದರು ಮತ್ತು 111 ಶಾಸಕರ ವಿರುದ್ಧ ಇನ್ನೂ ದಾವೆಗಳು ಚಾಲ್ತಿಯಲ್ಲಿದ್ದು, ಇವು ಸುಮಾರು 10 ವರ್ಷಗಳ ಹಿಂದೆ ದಾಖಲಾದ ಪ್ರಕರಣಗಳಾಗಿವೆ ಎಂದು ನೂತನ ಸಮೀಕ್ಷೆಯು ತಿಳಿಸಿದೆ.

67 ಸಂಸದರು, 296 ಶಾಸಕರ ವಿರುದ್ಧ ಪ್ರಕರಣಗಳಿವೆ ಎಂದು ಒಟ್ಟಾರೆ 542 ಸಂಸದರು, 1,953 ಶಾಸಕರು ಸಲ್ಲಿಸಿದ ಚುನಾವಣಾ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿರುವ ಪ್ರಜಾಪ್ರಭುತ್ವ ಸುಧಾರಣಾ ಸಂಸ್ಥೆಯು (ಎಡಿಆರ್‌) ವಿವರ ನೀಡಿದೆ.

ADVERTISEMENT

ಸಂಸದರ ವಿರುದ್ಧ ಸರಾಸರಿ ಆರು ವರ್ಷಗಳು ಹಾಗೂ ಶಾಸಕರ ವಿರುದ್ಧ ಸರಾಸರಿ ಏಳು ವರ್ಷಗಳಿಂದ ಈ ಪ್ರಕರಣಗಳು ಬಾಕಿ ಉಳಿದಿವೆ. ಒಟ್ಟು 9 ಮಂದಿ ಜನಪ್ರತಿನಿಧಿಗಳ ವಿರುದ್ಧ ಸುಮಾರು 25 ವರ್ಷದ ಹಿಂದೆ ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿಯನ್ನೂ ಈ ಸಮೀಕ್ಷೆ ಹೊರಹಾಕಿದೆ.

ಬಿಜೆಪಿ ಶಾಸಕ, ಬಿಹಾರದ ರಾಮನಾರಾಯಣ ಮಂಡಲ್‌ ವಿರುದ್ಧ 31 ವರ್ಷದಿಂದ ಪ್ರಕರಣ ಬಾಕಿ ಇದೆ. 1989ರಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 2010ರಲ್ಲಿ ನಿಯಮ ಮೀರಿ ಜನರ ಗುಂಪುಗೂಡಿಸುವಿಕೆ, ಮಾರಕಾಸ್ತ್ರಗಳ ಸಾಗಣೆ, ಹಲ್ಲೆ, ಸಂಚು ಸಂಬಂಧಿತ ಆರೋಪಗಳನ್ನು ದಾಖಲಿಸಲಾಗಿದೆ.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಶಾಸಕ ಮನೋರಂಜನ್ ಬ್ಯಾಪಾರಿ ವಿರುದ್ಧವೂ 31 ವರ್ಷದ ಹಿಂದೆ ಪ್ರಕರಣ ದಾಖಲಾಇದ್ದರೂ, 2019ರ ಡಿಸೆಂಬರ್‌ನಲ್ಲಿ ಆರೋಪಗಳ ಪಟ್ಟಿ ಮಾಡಲಾಗಿದೆ. ಜೆಎಂಎಂನ ಮಿಥಿಲೇಶ್‌ ಕುಮಾರ್ ಠಾಕೂರ್‌, ಸೌಮ್ಯ ರಂಜನಾ ಪಟ್ನಾಯಿಕ್‌ ವಿರುದ್ಧ 29 ವರ್ಷದಿಂದ ಪ್ರಕರಣವಿದೆ.

ಎಡಿಆರ್‌ನ ವರದಿ ಅನುಸಾರ, ಕ್ರಿಮಿನಲ್‌ ಹಿನ್ನೆಲೆಯ ಜನಪ್ರತಿನಿಧಿಗಳಲ್ಲಿ ಬಿಜೆಪಿ ನಂತರದ ಸ್ಥಾನದಲ್ಲಿ ಕಾಂಗ್ರೆಸ್‌ ಇದ್ದು, ಈ ಪಕ್ಷದ 47 ಮಂದಿ ಸಂಸದರು, ಶಾಸಕರ ವಿರುದ್ಧ ಪ್ರಕರಣಗಳಿವೆ. ಅಂತೆಯೇ, ತೃಣಮೂಲ ಕಾಂಗ್ರೆಸ್‌ನ 25, ಬಿಜೆಡಿ, ವೈಎಸ್‌ಆರ್ ಕಾಂಗ್ರೆಸ್‌, ಸಿಪಿಎಂನ ತಲಾ 22 ಜನಪ್ರತಿನಿಧಿಗಳು ಇದ್ದಾರೆ. ಉಳಿದಂತೆ ಡಿಎಂಕೆ 14, ಆರ್‌ಜೆಡಿ 14 ಮತ್ತು ಎಎಪಿ ಮತ್ತು ಶಿವಸೇನಾದ ತಲಾ 12 ಜನಪ್ರತಿನಿಧಿಗಳಿದ್ದಾರೆ.

ಚುನಾವಣೆಗಳ ಪೈಕಿ 2019ರ ಲೋಕಸಭೆ ಚುನಾವಣೆಯಲ್ಲಿ ಗರಿಷ್ಠ ಸಂಖ್ಯೆಯ ಅಂದರೆ 67 ರಾಜಕಾರಣಿಗಳು, ನಂತರ ಸ್ಥಾನದಲ್ಲಿ 2020ರ ಬಿಹಾರ ಚುನಾವಣೆಯಲ್ಲಿ 54, 2021ರ ಕೇರಳ ವಿಧಾನಸಭೆ ಚುನಾವಣೆಯಲ್ಲಿ 42 ಮಂದಿ ತಮ್ಮ ವಿರುದ್ಧ ಕ್ರಿಮಿನಲ್‌ ಆರೋಪಗಳಿರುವುದನ್ನು ಘೋಷಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.