ನವದೆಹಲಿ: ಅಲ್ಕೋಹಾಲ್ ಸೇವಿಸದ ಭಾರತೀಯರ ಪೈಕಿ ಶೇ 38ರಷ್ಟು ಜನರಲ್ಲಿ ಫ್ಯಾಟಿ ಲಿವರ್ (ಪಿತ್ತ ಜನಕಾಂಗದಲ್ಲಿ ಕೊಬ್ಬು ಸೇರಿಕೊಳ್ಳುವುದು) ಕಾಯಿಲೆ ಇದೆ ಎಂದು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಐಐಎಂಎಸ್) ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.
ಈ ವಿದ್ಯಮಾನ ವಯಸ್ಕರಿಗೆ ಮಾತ್ರ ಸೀಮಿತವಾಗಿಲ್ಲ, ಶೇ 35ರಷ್ಟು ಮಕ್ಕಳಲ್ಲಿಯೂ ಈ ತೊಂದರೆ ಇದೆ ಎಂದೂ ಅಧ್ಯಯನ ಹೇಳಿದೆ. ‘ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸಪರಿಮೆಂಟಲ್ ಹೆಪಟಾಲಜಿ’ ಎಂಬ ನಿಯತಕಾಲಿಕದಲ್ಲಿ ಕಳೆದ ವರ್ಷ ಜೂನ್‌ನಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.
ಈ ಕಾಯಿಲೆಯನ್ನು ‘ನಾನ್ ಅಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್’ (ಎನ್‌ಎಎಫ್‌ಎಲ್‌ಡಿ) ಎಂದು ಕರೆಯಲಾಗುತ್ತದೆ. ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ಆರಂಭಿಕ ಹಂತದಲ್ಲಿ ಈ ಕಾಯಿಲೆ ಪತ್ತೆಯಾಗುವುದಿಲ್ಲ. ಕ್ರಮೇಣ ಉಲ್ಬಣಿಸಿ, ರೋಗಿಗಳಲ್ಲಿ ತೀವ್ರ ತೊಂದರೆಗೆ ಕಾರಣವಾಗುತ್ತದೆ.
‘ಎನ್‌ಎಎಫ್‌ಎಲ್‌ಡಿ’ಗೆ ಕಾರಣಗಳು
* ಪಾಶ್ಚಾತ್ಯ ಆಹಾರಪದ್ಧತಿ ಅನುಕರಣೆ
* ಅತಿಯಾದ ಫಾಸ್ಟ್‌ಫುಡ್‌ಗಳ ಸೇವನೆ
* ಹಣ್ಣುಗಳು ಮತ್ತು ತರಕಾರಿಗಳ ಸೇವನೆ ಕಡಿಮೆ ಮಾಡುವುದು
* ಅನಾರೋಗ್ಯಕರ ಮತ್ತು ವ್ಯಾಯಾಮ ಇರದ ಜೀವನಶೈಲಿ
* ಅಂಗಡಿಗಳಲ್ಲಿ ಸುಲಭವಾಗಿ ಸಿಗುವ (ಒವರ್ ದಿ ಕೌಂಟರ್) ಔಷಧಗಳ ಸೇವನೆಯೂ ಕೆಲವೊಮ್ಮೆ ಪಿತ್ತಜನಕಾಂಗಕ್ಕೆ ಹಾನಿ ಮಾಡುವುದು
ಪರಿಹಾರಗಳೇನು
* ಆರೋಗ್ಯಕರ ಜೀವನ ಶೈಲಿ ಅಳವಡಿಕೆ
* ಬೊಜ್ಜು ಇರುವವರು ತೂಕ ಕಡಿಮೆ ಮಾಡಿಕೊಳ್ಳುವುದು
* ಜಂಕ್ ಮತ್ತು ಸಕ್ಕರೆ ಅಂಶ ಇರುವ ಆಹಾರಗಳ ಮಿತ ಸೇವನೆ
* ನಿಯಮಿತ ವ್ಯಾಯಾಮ
ಸದ್ಯ ‘ಫ್ಯಾಟಿ ಲಿವರ್’ ಕಾಯಿಲೆಗೆ ಅನುಮೋದಿತ ಪರಿಣಾಮಕಾರಿ ಚಿಕಿತ್ಸೆ ಇಲ್ಲ. ಆದರೆ ಆರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಳವಡಿಕೆಯಿಂದ ಈ ಕಾಯಿಲೆಯಿಂದ ಹೊರಬರಬಹುದು. ಸ್ವಯಂ ಆಗಿ ಔಷಧಗಳನ್ನು ತೆಗೆದುಕೊಳ್ಳುವುದು ಅಪಾಯಕಾರಿ.ಡಾ.ಅನೂಪ್ ಸರಾಯ್ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಎಐಐಎಂಎಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.