ADVERTISEMENT

ವಿಮಾನ ಡಿಕ್ಕಿ ಹೊಡೆದು 39 ರಾಜಹಂಸಗಳ ಸಾವು: BNHS

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮೇ 2024, 15:20 IST
Last Updated 21 ಮೇ 2024, 15:20 IST
<div class="paragraphs"><p>ರಾಜಹಂಸಗಳ ಕಳೇಬರ</p></div>

ರಾಜಹಂಸಗಳ ಕಳೇಬರ

   

(ಚಿತ್ರ ಕೃಪೆ–@MBTheGuide)

ಮುಂಬೈ (ಮಹಾರಾಷ್ಟ್ರ): ವಿಮಾನವೊಂದು ಡಿಕ್ಕಿ ಹೊಡೆದು 39 ರಾಜಹಂಸಗಳು ಸಾವಿಗೀಡಾಗಿವೆ. ಸೋಮವಾರ ರಾತ್ರಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (CSMIA) ಇಳಿಯುವ ಕೆಲವೇ ಕ್ಷಣಗಳ ಮೊದಲು ಈ ಘಟನೆ ನಡೆದಿದೆ.

ADVERTISEMENT

ಮಹಾರಾಷ್ಟ್ರ ಅರಣ್ಯ ಇಲಾಖೆ (MFD) ಮತ್ತು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS) ಈ ಬಗ್ಗೆ ದೃಢಪಡಿಸಿವೆ.

ವರದಿಗಳ ಪ್ರಕಾರ, ಘಾಟ್ಕೋಪರ್ ಪ್ರದೇಶದಲ್ಲಿ ಬೋಯಿಂಗ್ 777 ವಿಮಾನ ಪಕ್ಷಿಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ವಿಮಾನದಲ್ಲಿ 300ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಈ ಬಗ್ಗೆ ಸಿಎಸ್‌ಎಂಐಎ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂದು ಎಮಿರೇಟ್ಸ್ ತಿಳಿಸಿದೆ.

ವಿಮಾನವು ಪಕ್ಷಿಗಳಿಗೆ ಡಿಕ್ಕಿಹೊಡೆದಿದ್ದು ಹೇಗೆ, ವಿಮಾನದ ಪೈಲಟ್‌ಗೆ ಹಕ್ಕಿಗಳ ಗುಂಪನ್ನು ರೇಡಾರ್‌ನಲ್ಲಿ ಗುರುತಿಸಲು ಸಾಧ್ಯವಾಗಲಿಲ್ಲವೇ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (ಡಿಜಿಸಿಐ) ನವಿ ಮುಂಬೈನ ನ್ಯಾಟ್‌ಕನೆಕ್ಟ್‌ ಫೌಂಡೇಷನ್ ಒತ್ತಾಯಿಸಿದೆ.

ಅಂಧೇರಿ-ಘಾಟ್ಕೋಪರ್ ಸಂಪರ್ಕ ರಸ್ತೆಯಲ್ಲಿ ಪಕ್ಷಿಗಳ ಕಳೇಬರ ಪತ್ತೆಯಾಗಿದ್ದವು. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮ್ಯಾಂಗ್ರೋವ್ ಸೆಲ್‌ನ ಹೆಚ್ಚುವರಿ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ವಿ ರಾಮರಾವ್ ತಿಳಿಸಿದ್ದಾರೆ.

ಮುಂಬೈ ಘಾಟ್ಕೋಪರ್‌ನ ಹಲವೆಡೆ ಸತ್ತ ಪಕ್ಷಿಗಳು ಕಂಡುಬಂದಿರುವ ಬಗ್ಗೆ ಜನರು ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಥಾಣೆ ಕ್ರೀಕ್ ಫ್ಲೆಮಿಂಗೊ ​​ಅಭಯಾರಣ್ಯದ ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಬಹಾದುರೆ, ಮುಂಬೈ ಮ್ಯಾಂಗ್ರೋವ್ ಸಂರಕ್ಷಣಾ ಘಟಕದ ವಿಭಾಗೀಯ ಅರಣ್ಯಾಧಿಕಾರಿ ದೀಪಕ್ ಖಾಡೆ ಮತ್ತು ಮ್ಯಾಂಗ್ರೋವ್ ಪ್ರೊಟೆಕ್ಷನ್-ಮುಂಬೈನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿಕ್ರಾಂತ್ ಖಾಡೆ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ರಾಜಹಂಸಗಳ ಕಳೇಬರಗಳನ್ನು ನವಿ ಮುಂಬೈನ ಐರೋಲಿಯಲ್ಲಿರುವ ಕರಾವಳಿ ಮತ್ತು ಸಾಗರ ಜೀವವೈವಿಧ್ಯ ಕೇಂದ್ರದಲ್ಲಿ ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ವಿಮಾನ ಡಿಕ್ಕಿ ಹೊಡೆದ ಪರಿಣಾಮ ಪಕ್ಷಿಗಳು ಸಾವೀಗೀಡಾಗಿವೆ ಎಂದು ಬಿಎನ್‌ಎಚ್‌ಎಸ್‌ ನಿರ್ದೇಶಕ ಕಿಶೋರ್ ರಿಥೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.