ಭೋಪಾಲ್: ಮಧ್ಯಪ್ರದೇಶದ ಭೋಪಾಲ್‌ನಲ್ಲಿ 1984ರ ಡಿಸೆಂಬರ್ 2ರಂದು ರಾತ್ರಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡ ಅನಿಲ ದುರಂತವು 39 ವರ್ಷಗಳ ಬಳಿಕವೂ ಹಲವರಿಗೆ ಕಹಿ ನೆನಪಾಗಿ ಕಾಡುತ್ತಿದೆ.
ಭೋಪಾಲ್‌ನಲ್ಲಿರುವ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ ವಿಷಅನಿಲ ಸೋರಿಕೆಯಿಂದಾಗಿ 3,787 ಮಂದಿ ಸಾವನ್ನಪ್ಪಿದ್ದರು. ಅಲ್ಲದೆ, ಐದು ಲಕ್ಷಕ್ಕಿಂತ ಹೆಚ್ಚು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು.
ಈ ಘಟನೆಯಲ್ಲಿ ಸಿಲುಕಿ ಬದುಕುಳಿದ ಸಂತ್ರಸ್ತರಾದ ರೈಲ್ವೆಯ ನಿವೃತ್ತ ಅಧಿಕಾರಿಯಾದ ಮಹೇಂದ್ರಜೀತ್ ಸಿಂಗ್ ಮಾತನಾಡಿ, ‘ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಸ್ವಲ್ಪವೇ ದೂರವಿರುವ ರೈಲ್ವೆ ಕಾಲೊನಿಯಲ್ಲಿ ನನ್ನ ಮನೆ ಇತ್ತು. ಅಂದು ರಾತ್ರಿ ವಿಷಅನಿಲ ಸೇವನೆಯಿಂದಾಗಿ ಜನರ ನರಳಾಟ ಮತ್ತು ಕೂಗಾಟ ಕೇಳಿ ನನಗೆ ಮತ್ತು ಕುಟುಂಬಸ್ಥರಿಗೆ ತುಂಬಾ ಗಾಬರಿಯಾಯಿತು. ಅಂದು ರಾತ್ರಿ ಜನರು ಕುಸಿದು ಬೀಳುವುದನ್ನು ಕಂಡು ನಾನು ನಡುಗಿಹೋಗಿದ್ದೆ. ಆಗ ನಾನು ಮತ್ತು ಕುಟುಂಬಸ್ಥರು ಮನೆಯನ್ನು ತೊರೆದು ಸ್ಕೂಟರ್‌ನಲ್ಲಿ ನಾಲ್ಕು ಕಿ. ಮೀ ದೂರ ಇರುವ ಹೋಟೆಲ್‌ನಲ್ಲಿ ತಂಗಿದ್ದೆವು. ಆದರೆ, ಈ ಘಟನೆಯಲ್ಲಿ ನನ್ನ ಹಲವು ಸಹೋದ್ಯೋಗಿಗಳನ್ನು ಕಳೆದುಕೊಂಡೆ’ ಎಂದು ಕಣ್ಣೀರಾದರು.
ಅಂದಿನ ಘಟನೆ ನೆನಪಿಸಿಕೊಂಡಾಗಲೆಲ್ಲಾ ನನ್ನ ಮೈಯಲ್ಲಿ ನಡುಕ ಹುಟ್ಟುತ್ತದೆ. ಅನಿಲ ದುರಂತ ಸಂಭವಿಸಿದಾಗ ನಾನು ಅಲ್ಲೆ ಇದ್ದ ಕಾರಣ ನನಗೆ ಉಸಿರಾಟದ ಸಮಸ್ಯೆ ಹಾಗೂ ಅಸ್ತಮಾ ಇದೆ ಎಂದು ಮತ್ತೊಬ್ಬ ರೈಲ್ವೆ ಸಿಬ್ಬಂದಿ ಅವಲತ್ತುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.