ಸಾಗರ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸುನಾರ್ ನದಿಯಲ್ಲಿ ನೀರಿನ ಮಟ್ಟ ಏಕಾಏಕಿ ಏರಿಕೆಯಾದ ಪರಿಣಾಮ ತೊಂದರೆಗೆಸಿಲುಕಿದ ನಾಲ್ವರು ಮಕ್ಕಳು ಸೇರಿದಂತೆ ಹಲವು ಕಾರ್ಮಿಕರನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಿಸಿದೆ.
ನೀರಿನ ಮಟ್ಟ ಏರಿಕೆಯಾಗಿದ್ದರಿಂದ ನಿರ್ಮಾಣ ಹಂತದಲ್ಲಿದ್ದ ಸೇತುವೆ ದಾಟಲಾಗದೇ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರು. ಬಳಿಕ ಎಸ್‌ಡಿಆರ್‌ಎಫ್ ತಂಡವು ರಕ್ಷಣಾ ಕಾರ್ಯಚರಣೆ ನಡೆಸಿತ್ತು. ಸೇತುವೆಗೆ ಅಡ್ಡಲಾಗಿ ಕಟ್ಟಿದ ಹಗ್ಗಗಳ ಸಹಾಯದಿಂದ ಕಾರ್ಮಿಕರನ್ನು ರಕ್ಷಿಸಲು ನೆರವಾದರು.
ಏತನ್ಮಧ್ಯೆ ನದಿಯ ಮತ್ತೊಂದು ದಡದಲ್ಲಿದ್ದ ನಾಲ್ವರು ಮಕ್ಕಳನ್ನು ಎಸ್‌ಡಿಆರ್‌ಎಫ್ ತಂಡ ಸುರಕ್ಷಿತವಾಗಿ ಕರೆತಂದಿದೆ.
ನದಿಯಲ್ಲಿ ನೀರಿನ ಮಟ್ಟ ಏರಿದ್ದರಿಂದ ಇನ್ನೊಂದು ಬದಿಯಲ್ಲಿ ಮಕ್ಕಳು ಸಿಲುಕಿದ್ದರು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ ಅವರು ನದಿ ದಾಟಿದ್ದರು. ಆದರೆ 10 ಗಂಟೆಯ ವೇಳೆಗೆ ನದಿಯ ನೀರಿನ ಮಟ್ಟ ಏರಿತ್ತು. ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಎಸ್‌ಡಿಆರ್‌ಎಫ್ ತಂಡ ಮಕ್ಕಳನ್ನು ರಕ್ಷಿಸಿದೆ ಎಂದು ಸಾಗರದ ಉಪ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ವಿಕ್ರಮ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ನಿರ್ಮಾಣ ಪೂರ್ಣಗೊಳ್ಳದ ಸೇತುವೆಯಲ್ಲಿ ಕೆಲವು ಕಾರ್ಮಿಕರು ಸಿಲುಕಿದ್ದರು. ಅವರನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದೆ ಎಂದವರು ಮಾಹಿತಿ ಒದಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.