ADVERTISEMENT

ಕಾಶ್ಮೀರದಲ್ಲಿ ಮೂವರು ಪೊಲೀಸರನ್ನು ಅಪಹರಿಸಿ ಕೊಂದ ಉಗ್ರಗಾಮಿಗಳು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2018, 5:27 IST
Last Updated 21 ಸೆಪ್ಟೆಂಬರ್ 2018, 5:27 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಶೋಪಿಯಾನ್ (ಜಮ್ಮು): ದಕ್ಷಿಣ ಕಾಶ್ಮೀರದ ಕರ್ಪಾನ್ ಗ್ರಾಮದಿಂದ ಶುಕ್ರವಾರ (ಇಂದು) ಅಪಹರಿಸಿದ್ದ ಒಟ್ಟು ನಾಲ್ವರು ಪೊಲೀಸರ ಪೈಕಿ ಮೂವರನ್ನು ಉಗ್ರಗಾಮಿಗಳು ಕೊಂದು ಹಾಕಿದ್ದಾರೆ. ಸ್ಥಳೀಯರ ನೆರವಿನಿಂದ ಭದ್ರತಾಪಡೆಗಳು ಓರ್ವ ಸಿಬ್ಬಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿವೆ.ಮೂವರು ವಿಶೇಷ ಪೊಲೀಸ್‌ ಅಧಿಕಾರಿಗಳು (ಎಸ್‌ಪಿಒ) ಮತ್ತು ಓರ್ವ ಪೊಲೀಸ್ ಕಾನ್‌ಸ್ಟೆಬಲ್‌ ಸೇರಿ ಒಟ್ಟು ನಾಲ್ಕು ಮಂದಿಯನ್ನು ಉಗ್ರಗಾಮಿಗಳು ಅಪಹರಿಸಿದ್ದರು

ಕರ್ಪಾನ್‌ ಗ್ರಾಮದಲ್ಲಿ ಮನೆಗಳಿಗೆ ನುಗ್ಗಿದ ಭಯೋತ್ಪಾದಕರು ಫಿರ್ದೋಸ್ ಅಹಮದ್ ಕುಚೈ, ಕುಲ್‌ದೀಪ್‌ ಸಿಂಗ್, ನಿಸಾರ್ ಅಹ್ಮದ್ ಧೋಬಿ ಮತ್ತು ಫಯಾಜ್ ಅಹ್ಮದ್ ಭಟ್ ಅವರನ್ನು ಎಳೆದೊಯ್ದರು ಎಂದು ಪೊಲೀಸ್‌ ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆಗಳು ಈಚೆಗೆ ಹೆಚ್ಚಾಗಿದೆ. ಕೇವಲ ಮೂರುವಾರಗಳ ಹಿಂದೆಯಷ್ಟೇ ಭಯೋತ್ಪಾದಕರಿಂದ ಮೂವರು ಪೊಲೀಸ್ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಗಳ ಎಂಟು ಮಂದಿ ಸಂಬಂಧಿಕರನ್ನು ಬಿಡಿಸಿಕೊಳ್ಳಲು ಪೊಲೀಸರು ಉಗ್ರಗಾಮಿಗಳ ಕುಟುಂಬಕ್ಕೆ ಸೇರಿದ 12 ಮಂದಿಯನ್ನು ಬಿಡುಗಡೆ ಮಾಡಿದ್ದರು. ಇದರಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ ಉಗ್ರನ ತಂದೆ ರಿಯಾಜ್ ನೈಕೂ ಸಹ ಸೇರಿದ್ದರು. ಇದಾದ ಮೂರು ವಾರಗಳ ನಂತರ ಮತ್ತೊಮ್ಮೆ ಪೊಲೀಸರ ಅಹರಣ ವರದಿಯಾಗಿದೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರದಲ್ಲಿರುವ ಎಲ್ಲ ಪೊಲೀಸರು ತಮ್ಮ ಕೆಲಸಕ್ಕೆ ರಾಜೀನಾಮೆ ಕೊಡಬೇಕು ಅಥವಾ ಸಾಯಲು ಸಿದ್ಧರಾಗಬೇಕು’ ಎಂದು ಮಂಗಳವಾರವಷ್ಟೇ ಉಗ್ರರು ಸವಾಲು ಹಾಕಿದ್ದರು. ಉಗ್ರಗಾಮಿಗಳ ಸ್ಥಳೀಯ ನಾಯಕನೊಬ್ಬ ಕಾಶ್ಮೀರಿ ಭಾಷೆಯಲ್ಲಿ ಮಾತನಾಡಿದ ಈ ಬೆದರಿಕೆ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸೋಮವಾರವಷ್ಟೇ ಹಿಜ್ಬುಲ್ ಮುಜಾಹಿದ್ದೀನ್‌ ಭಯೋತ್ಪಾದಕರ ಗುಂಡಿಗೆ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದರು.

ಅಕ್ಟೋಬರ್ ಮತ್ತು ನವೆಂಬರ್‌ ತಿಂಗಳಲ್ಲಿ ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ನಡೆಯಲಿವೆ. ಸಂವಿಧಾನದ 35ಎ ವಿಧಿಯ ಉದ್ದೇಶಿತ ತಿದ್ದುಪಡಿ ವಿರೋಧಿಸಿ ಪಿಡಿಪಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿವೆ. ‘ಸ್ವಾತಂತ್ರ್ಯ ಬಯಸುವ’ ಕಾಶ್ಮೀರದ ಎಲ್ಲರೂ ಚುನಾವಣೆಗಳಿಂದ ದೂರ ಉಳಿಯಬೇಕು ಎಂದು ಪ್ರತ್ಯೇಕತವಾದಿ ಸಂಘಟನೆಗಳು ಕರೆ ನೀಡಿವೆ.

ಸಂವಿಧಾನದ 35ಎ ವಿಧಿಯು ಜಮ್ಮು ಮತ್ತು ಕಾಶ್ಮೀರದ ಜನರಿಗೆ ವಿಶೇಷ ಸವಲತ್ತು ಕೊಟ್ಟಿದೆ. ಇತರ ರಾಜ್ಯಗಳ ನಿವಾಸಿಗಳು ಕಾಶ್ಮೀರದಲ್ಲಿ ಸ್ಥಿರಾಸ್ತಿ ಖರೀದಿಸುವುದನ್ನು ನಿಷೇಧಿಸುತ್ತದೆ.ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುವ ಉಮೇದುವಾರರ ರಕ್ಷಣೆಯೂ ಭದ್ರತಾಪಡೆಗಳಿಗೆ ದೊಡ್ಡತಲೆನೋವಾಗಿ ಪರಿಣಮಿಸಿದೆ. ಈ ಸಮಯದಲ್ಲಿ ಹಿಂಸಾಚಾರದ ಪ್ರಮಾಣ ಹೆಚ್ಚಾಗಬಹುದು ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

‘ಪ್ರತಿಭಟನೆಯ ರಾಜಕಾರಣ ಮತ್ತು ಕಲ್ಲುತೂರಾಟದಂಥ ಚಟುವಟಿಕೆಗಳನ್ನು ಹತ್ತಿಕ್ಕಲಾಗಿದೆ. ಹೀಗಾಗಿ ಉಗ್ರಗಾಮಿಗಳಿಗೆ ದೊಡ್ಡ ಮಟ್ಟದ ಯಾವುದೇ ಚಟುವಟಿಕೆ ನಡೆಸಲು ಆಗುತ್ತಿಲ್ಲ. ಅವರು ಮನೆಯಲ್ಲಿರುವ ಪೊಲೀಸರು ಮತ್ತು ಅವರ ಕುಟುಂಬದ ಸದಸ್ಯರನ್ನು ಅಪಹರಿಸಲು ಮುಂದಾಗಿದ್ದಾರೆ’ ಎಂಬ ಗೃಹ ಇಲಾಖೆಯ ಅಧಿಕಾರಿಯೊಬ್ಬರ ಹೇಳಿಕೆಯನ್ನೂ ಎನ್‌ಡಿಟಿವಿ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.