ಲಖನೌ: ಉತ್ತರಾಖಂಡದ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಪಟ್ಟಣದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮದರಸಾ (ಇಸ್ಲಾಮಿಕ್ ಶಾಲೆ) ಮತ್ತು ಮಸೀದಿಯನ್ನು ಗುರುವಾರ ತೆರವುಗೊಳಿಸಿದ ನಂತರ ಭಾರಿ ಹಿಂಸಾಚಾರ ಭುಗಿಲೆದಿದ್ದು, ಆರು ಜನರು ಮೃತಪಟ್ಟಿದ್ದಾರೆ. ಪೊಲೀಸರು, ಸ್ಥಳೀಯ ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ನೂರಾರು ಜನರು ಗಾಯಗೊಂಡಿದ್ದಾರೆ.
ಪಟ್ಟಣದಲ್ಲಿ ಶುಕ್ರವಾರ ಕರ್ಪ್ಯೂ ವಿಧಿಸಲಾಗಿದ್ದು, ಕಂಡಲ್ಲಿ ಗುಂಡಿಕ್ಕಲು ಪೊಲೀಸರಿಗೆ ಆದೇಶಿಸಲಾಗಿದೆ. ಅಲ್ಲದೆ, ಇಂಟರ್‌ನೆಟ್ ಸಂಪರ್ಕ ಕೂಡ ಸ್ಥಗಿತಗೊಳಿಸಲಾಗಿದೆ. ಪಟ್ಟಣದಲ್ಲಿರುವ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುವಂತೆ ಜಿಲ್ಲಾಡಳಿತವು ಆದೇಶಿಸಿದೆ.
ಅಧಿಕೃತ ಮೂಲಗಳು ಸಾವಿನ ಸಂಖ್ಯೆ ಐದು ಎಂದು ಹೇಳಿದರೆ, ದೃಢೀಕರಿಸದ ವರದಿಗಳ ಪ್ರಕಾರ ಹಿಂಸಾಚಾರದಲ್ಲಿ ಆರು ಜನರು ಸತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ಪೊಲೀಸರ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ರಿಕ್ತರ ಗುಂಪು ಒತ್ತುವರಿ ತೆರವು ತಂಡ ಮತ್ತು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದೆ. ಪೆಟ್ರೋಲ್ ಪಂಪ್ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದು, ಪೊಲೀಸ್ ಠಾಣೆಯನ್ನು ಕೂಡ ಹಾನಿಗೊಳಿಸಲಾಗಿದೆ.
ಹಿಂಸಾಚಾರದಲ್ಲಿ 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ ಕೆಲವರು ಪ್ರಾಥಮಿಕ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಲ್ದ್ವಾನಿಗೆ ಧಾವಿಸಿ ಗಾಯಾಳುಗಳನ್ನು ಭೇಟಿ ಮಾಡಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಹಿಂಸಾಚಾರದಲ್ಲಿ ತೊಡಗಿರುವವರನ್ನು ಸರ್ಕಾರ ಸುಮ್ಮನೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.
ಮುಸ್ಲಿಮರ ಬಾಹುಳ್ಯದ ಬನ್‌ಭೂಲ್‌ಪುರದ ಮಲಿಕ್ ಕಾ ಬಗೀಚಾ ಪ್ರದೇಶದಲ್ಲಿ ಅಕ್ರಮವಾಗಿ ತಲೆಎತ್ತಿದ್ದ ಮದರಸಾ ಮತ್ತು ಮಸೀದಿ ಕೆಡವಲು ನೂರಾರು ಪೊಲೀಸರ ಜತೆಗೆ ಹಲ್ದ್ವಾನಿ ಮುನಿಸಿಪಲ್ ಕಾರ್ಪೊರೇಶನ್‌ನ ಒತ್ತುವರಿ ನಿಗ್ರಹ ತಂಡವು ಸ್ಥಳಕ್ಕೆ ಹೋದಾಗ ಹಿಂಸಾಚಾರ ನಡೆದಿದೆ.
ಬನ್‌ಭೂಲ್‌ಪುರದ ಇಕ್ಕಟ್ಟಾದ ಮಾರ್ಗಗಳಲ್ಲಿ ದುಷ್ಕರ್ಮಿಗಳ ಗುಂಪು ಪೊಲೀಸರು ಮತ್ತು ಒತ್ತುವರಿ ನಿಗ್ರಹ ತಂಡವನ್ನು ಸುತ್ತುವರೆದು, ಮೇಲ್ಛಾವಣಿಗಳಿಂದ ಕಲ್ಲುಗಳನ್ನು ತೂರಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ದುಷ್ಕರ್ಮಿಗಳನ್ನು ಗುರುತಿಸುವ ಕೆಲಸ ನಡೆಯುತ್ತಿದ್ದು, ಅವರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.