ಚೆನ್ನೈ: 16 ವರ್ಷದ ಬಾಲಕಿಯ ಅಂಡಾಣು ಮಾರಾಟದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ತಮಿಳುನಾಡಿನ ನಾಲ್ಕು ಫಲವಂತಿಕೆ ಆಸ್ಪತ್ರೆಗಳನ್ನು ಶಾಶ್ವತವಾಗಿ ಮುಚ್ಚುವಂತೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ ಆದೇಶ ಹೊರಡಿಸಿದೆ.
ಈರೋಡ್‌ನ ಬಾಲಕಿಯಿಂದ ಆಕೆಯ ತಾಯಿ ಮತ್ತು ಆಕೆಯ ಮಲತಂದೆ ಎಂಟು ಬಾರಿ ಅಂಡಾಣುವನ್ನು ಮಾರಾಟ ಮಾಡಿಸಿದ್ದಾರೆ ಎನ್ನಲಾಗಿದೆ. ಫಲವಂತಿಕೆ ಕೇಂದ್ರದ ಮೂಲಕ ತಪ್ಪಿಸಿಕೊಂಡು ಬಂದಿದ್ದ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಈ ಮೂಲಕ ಹಗರಣ ಬಯಲಾಗಿತ್ತು.
‘ಆಕೆಯನ್ನು ಪ್ರಾಪ್ತ ವಯಸ್ಕಳು ಎಂದು ತೋರಿಸಲು ಆಧಾರ್ ಕಾರ್ಡ್ ಅನ್ನು ನಕಲಿ ಮಾಡಲಾಗಿದೆ. ಕಾಲ್ಪನಿಕ ಗಂಡನ ಒಪ್ಪಿಗೆಯನ್ನು ಪಡೆಯಲಾಗಿದೆ’ ಎಂದು ಆರೋಗ್ಯ ಸಚಿವರು ಮಾ. ಸುಬ್ರಮಣಿಯನ್ ಹೇಳಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಯಾವುದೇ ಆಸ್ಪತ್ರೆ ಇಂಥ ಕೆಲಸದಲ್ಲಿ ತೊಡಗಿದ್ದರೆ ₹50 ಲಕ್ಷ ದಂಡ, 10 ವರ್ಷ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಮಲತಂದೆಯನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯನ್ನು ಸದ್ಯ ಆಶ್ರಯ ಕೇಂದ್ರದಲ್ಲಿ ಇರಿಸಲಾಗಿದೆ. ಆದರೆ, ತನ್ನನ್ನು ಸಂಬಂಧಿಗಳ ಮನೆಗೆ ಕಳುಹಿಸುವಂತೆ ಬಾಲಕಿ ಒತ್ತಾಯಿಸುತ್ತಿದ್ದು, ಇದನ್ನು ನಿರಾಕರಿಸಿದ್ದಕ್ಕಾಗಿ ಬುಧವಾರ ಆತ್ಮಹತ್ಯೆಗೆ ಪ್ರಯತ್ನ ನಡೆಸಿದ್ದಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.