ADVERTISEMENT

ಮಳೆ, ಬಿರುಗಾಳಿ: ಪಶ್ಷಿಮ ಬಂಗಾಳದಲ್ಲಿ 4 ಸಾವು, ವಿಮಾನಗಳ ಮಾರ್ಗ ಬದಲು

ಗುವಾಹಟಿ ವಿಮಾನನಿಲ್ದಾಣಕ್ಕೆ ಭಾರಿ ಹಾನಿ

ಪಿಟಿಐ
Published 31 ಮಾರ್ಚ್ 2024, 15:36 IST
Last Updated 31 ಮಾರ್ಚ್ 2024, 15:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜಲಪೈಗುರಿ/ಗುವಾಹಟಿ: ಪಶ್ಷಿಮ ಬಂಗಾಳ ಹಾಗೂ ಅಸ್ಸಾಂನಲ್ಲಿ ಭಾನುವಾರ ಬಿರುಗಾಳಿಯೊಂದಿಗೆ ಮಳೆ ಸುರಿದಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಮೃತಪಟ್ಟಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಸ್ಸಾಂ ರಾಜಧಾನಿ ಗುವಾಹಟಿಯಲ್ಲಿರುವ ಲೋಕಪ್ರಿಯ ಗೋಪಿನಾಥ ಬೋರ್ದಲೋಯಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಹಾನಿಯಾಗಿದೆ. ಕೆಲ ಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದ ಅಧಿಕಾರಿಗಳು, 6 ವಿಮಾನಗಳ ಮಾರ್ಗ ಬದಲಾಯಿಸಿದ್ದರು.

ADVERTISEMENT

ಜಲಪೈಗುರಿ ನಗರ ಹಾಗೂ ಪಕ್ಕದ ಮೈನಗುರಿ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದಿವೆ. ಹಲವಾರು ಮರಗಳು ಹಾಗೂ ವಿದ್ಯುತ್‌ ಕಂಬಗಳು ಬುಡಮೇಲಾಗಿವೆ. ಜಲಪೈಗುರಿ ಜಿಲ್ಲೆಯ ರಾಜರ್‌ಹಾಟ್, ಬರ್ನಿಷ್‌, ಬಾಕಲಿ, ಜೋರ್‌ಪಕಡಿ, ಮಾಧಬ್‌ಡಾಂಗಾ, ಸಪ್ತಿಬಾರಿ ಪ್ರದೇಶಗಳಲ್ಲಿ ಹೆಚ್ಚು ಹಾನಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ರಕ್ಷಣಾ ಕಾರ್ಯಕ್ಕಾಗಿ ಜಿಲ್ಲಾಡಳಿತ ಅಧಿಕಾರಿಗಳಲ್ಲದೇ, ಪೊಲೀಸರು, ವಿಪತ್ತು ನಿರ್ವಹಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

‘ಗುವಾಹಟಿ ವಿಮಾನ ನಿಲ್ದಾಣ ಬಳಿ ಇರುವ, ಅದಾನಿ ಸಮೂಹ ನಿಯಂತ್ರಣದ ಆಯಿಲ್‌ ಇಂಡಿಯಾ ಸಂಸ್ಥೆಯ ಘಟಕ ಸಮೀಪದ ದೊಡ್ಡ ಮರವೊಂದು ಬಿದ್ದ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು’ ಎಂದು ಮುಖ್ಯ ವಿಮಾನನಿಲ್ದಾಣ ಅಧಿಕಾರಿ (ಸಿಎಒ) ಉತ್ಪಲ್‌ ಬರುವಾ ಹೇಳಿದ್ದಾರೆ.

‘ಸಂಸ್ಥೆಯ ಕಟ್ಟಡ ಬಹಳ ಹಳೆಯದು. ಹೀಗಾಗಿ, ಬಿರುಗಾಳಿಯಿಂದ ಉಂಟಾದ ಹಾನಿಯನ್ನು ತಾಳುವ ಶಕ್ತಿ ಹೊಂದಿರಲಿಲ್ಲ. ಚಾವಣಿಗೂ ಹಾನಿಯಾಗಿ, ಸೋರಲಾರಂಭಿಸಿತ್ತು. ಅದೃಷ್ಟವಶಾತ್, ಈ ಅವಘಡದಲ್ಲಿ ಯಾರಿಗೂ ಗಾಯಗಳಾಗಿಲ್ಲ’ ಎಂದು ಹೇಳಿದ್ದಾರೆ.

ಆಯಿಲ್ ಇಂಡಿಯಾ ಘಟಕದ ಚಾವಣಿ ಬೀಳುತ್ತಿದೆ ಹಾಗೂ ಕಟ್ಟಡದ ಒಳಗೆ ನೀರು ನುಗ್ಗುತ್ತಿದೆ ಎನ್ನಲಾದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಗುವಾಹಟಿಯಿಂದ ಕಾರ್ಯಾಚರಿಸುವ ಇಂಡಿಗೊ, ಏರ್‌ ಇಂಡಿಯಾ ಹಾಗೂ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳ ಮಾರ್ಗ ಬದಲಾಯಿಸಿ, ಅಗರ್ತಲಾ ಮತ್ತು ಕೋಲ್ಕತ್ತಕ್ಕೆ ಕಳುಹಿಸಲಾಯಿತು’ ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.