ADVERTISEMENT

4 ರಾಜ್ಯಗಳ ವಿಧಾನಸಭಾ ಚುನಾವಣೆ: ರಾಜ್ಯ ನಾಯಕರೊಂದಿಗೆ ‘ಕೈ’ ಹೈಕಮಾಂಡ್‌ ಸಭೆ

ಪಕ್ಷವನ್ನು ಸಜ್ಜುಗೊಳಿಸಲು ತೀರ್ಮಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2024, 23:30 IST
Last Updated 18 ಜೂನ್ 2024, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪುನಶ್ಚೇತನದ ಪ್ರದರ್ಶನ ನೀಡಿರುವ ಕಾಂಗ್ರೆಸ್‌ ಪಕ್ಷವು ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ನಾಲ್ಕು ರಾಜ್ಯಗಳ ನಾಯಕರೊಂದಿಗೆ ಸಭೆ ಆಯೋಜಿಸಿದೆ. 

ಜೂನ್‌ 24ರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಮಹಾರಾಷ್ಟ್ರ, ಹರಿಯಾಣ, ಜಾರ್ಖಂಡ್‌, ಜಮ್ಮು ಮತ್ತು ಕಾಶ್ಮೀರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಕ್ಷದ ಸಂಘಟನೆ ಬಲ‍ಪಡಿಸಲು ಹಾಗೂ ಚುನಾವಣಾ ಕಾರ್ಯತಂತ್ರ ರೂಪಿಸುವ ಸಂಬಂಧ ಚರ್ಚೆ ನಡೆಸಲಾಗುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ. 

ADVERTISEMENT

ಈ ವರ್ಷಾಂತ್ಯದೊಳಗೆ ಮಹಾರಾಷ್ಟ್ರ, ಹರಿಯಾಣ ಹಾಗೂ ಜಾರ್ಖಂಡ್‌ ವಿಧಾನಸಭೆಗಳಿಗೆ ಚುನಾವಣೆ ನಡೆಯಲಿದೆ. ಸೆ‍ಪ್ಟೆಂಬರ್‌ 30ರೊಳಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ರಾಜ್ಯಗಳಿಗೆ ಚುನಾವಣಾ ಉಸ್ತುವಾರಿ ಹಾಗೂ ಸಹ ಉಸ್ತುವಾರಿಗಳನ್ನು ಬಿಜೆಪಿ ಸೋಮವಾರ ನೇಮಿಸಿತ್ತು. ಅದರ ಬೆನ್ನಲ್ಲೇ, ಕಾಂಗ್ರೆಸ್‌ ಪಕ್ಷವು ಚುನಾವಣೆಗೆ ಸಿದ್ಧತೆ ಆರಂಭಿಸಿದೆ. 

ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಹಾವಿಕಾಸ್‌ ಅಘಾಡಿ ಮೈತ್ರಿಕೂಟವು ಉತ್ತಮ ಸಾಧನೆ ಮಾಡಿತ್ತು. ಕಾಂಗ್ರೆಸ್‌ ಪಕ್ಷ 13, ಶಿವಸೇನೆ (ಉದ್ಧವ್‌ ಠಾಕ್ರೆ ಬಣ) 9 ಹಾಗೂ ಎನ್‌ಸಿಪಿ (ಶರದ್‌ ‍ಪವಾರ್‌ ಬಣ) 8 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದವು. ರಾಜ್ಯದಲ್ಲಿ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ಮೈತ್ರಿಕೂಟದ ಪಕ್ಷಗಳು ಈಗಾಗಲೇ ನಿರ್ಧರಿಸಿವೆ. ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್‌ ಪಕ್ಷವು ಚೌಕಾಸಿ ನಡೆಸುವ ಸಂಭವ ಇದೆ. ಜೂನ್‌ 25ರ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷವು ಕಾರ್ಯತಂತ್ರ ರೂಪಿಸುವ ಸಾಧ್ಯತೆ ಇದೆ. 

ಹರಿಯಾಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕೈ ಪಾಳಯವು ಐದು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಎಎಪಿ ಜತೆಗೆ ಮೈತ್ರಿ ಮಾಡಿಕೊಂಡಿತ್ತು. ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಗೆ ಕಾಂಗ್ರೆಸ್‌ನ ರಾಜ್ಯ ಘಟಕ ವಿರೋಧ ವ್ಯಕ್ತಪಡಿಸಿದೆ. ಎಎಪಿ ಜತೆಗಿನ ಮೈತ್ರಿ ಮುಂದುವರಿಸಬೇಕೇ ಬೇಡವೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

ಜಾರ್ಖಂಡ್‌ನಲ್ಲಿ ಜೆಜೆಎಂ–ಕಾಂಗ್ರೆಸ್‌ ಮೈತ್ರಿಕೂಟದ ಸರ್ಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಈ ಮೈತ್ರಿಕೂಟವು ಸುಧಾರಿತ ಪ್ರದರ್ಶನ ನೀಡಿದೆ. 

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕೈ ಪಾಳಯ ಒಲವು ತೋರಿದೆ. 

ಈ ನಡುವೆ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಂಧ್ರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ವೈ.ಎಸ್‌.ಶರ್ಮಿಳಾ ಮಂಗಳವಾರ ಭೇಟಿ ಮಾಡಿ ಸಮಾಲೋಚಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.