ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಜೈಷ್-ಇ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ನಾಲ್ವರು ಮೃತರಾಗಿದ್ದಾರೆ.
ಹಂಜಾನ್ ಪ್ರದೇಶದಲ್ಲಿ ಉಗ್ರರು ಇರುವ ಖಚಿತ ಮಾಹಿತಿ ಮೇರೆಗೆ ಶೋಧ ಕಾರ್ಯ ಆರಂಭಿಸಿದ ಭದ್ರತಾ ಪಡೆ, ಭಯೋತ್ಪಾದಕರ ದಾಳಿಗೆ ಪ್ರತಿದಾಳಿ ನಡೆಸಿ ಉಗ್ರರನ್ನು ಹೊಡೆದುರುಳಿಸಿದೆ.
ಗುಂಡಿನ ಚಕಮಕಿಯ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಯುವಕರ ಗುಂಪು ಭದ್ರತಾ ಪಡೆ ಸಿಬ್ಬಂದಿಯತ್ತ ಕಲ್ಲು ತೂರಾಟಕ್ಕೆ ಇಳಿಯಿತು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆ ಪೆಲೆಟ್ ಗುಂಡು ಹಾಗೂ ಅಶ್ರುವಾಯು ಪ್ರಯೋಗಿಸಿದರು. ಗಲಭೆಯಲ್ಲಿ ಹನ್ನೇರಡಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ.
ಈ ವರ್ಷ ಭದ್ರತಾ ಪಡೆ 250 ಉಗ್ರರನ್ನು ಹತ್ಯೆ ಮಾಡಿದೆ.
ಹಂಜಾನ್‌ನಲ್ಲಿ ಉಗ್ರರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆ ಖಚಿತವಾದ ಮಾಹಿತಿ ನೀಡಿತ್ತು.ಮೃತ ಉಗ್ರರು ಜೈಷೆ–ಇ–ಮೊಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆಗೆ ಸೇರಿದ್ದಾರೆ. ಇವರಲ್ಲಿ ಒಬ್ಬ ವಿದೇಶಿ ಉಗ್ರನಾಗಿದ್ದು ಅವನು ಪಾಕಿಸ್ತಾನಕ್ಕೆ ಸೇರಿದನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಕಾಶ್ಮೀರದ ಹಿರಿಯ ಪೊಲೀಸ್ ಮಹಾನಿರ್ದೇಶಕ ಎಸ್.ಪಿ. ಪಣಿ ತಿಳಿಸಿದ್ದಾರೆ.
ಹಂಜಾನ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.