ADVERTISEMENT

ರಾಜಸ್ಥಾನ |ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಸಬ್ ಇನ್ಸ್‌ಪೆಕ್ಟರ್‌ ಬಂಧನ

4 ವರ್ಷದ ಮಗು ಮೇಲೆ ಅತ್ಯಾಚಾರ ಆರೋಪ-ಎಸ್‌ಐಗೆ ಜನರಿಂದ ಥಳಿತ-ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ.

ಪಿಟಿಐ
Published 11 ನವೆಂಬರ್ 2023, 11:40 IST
Last Updated 11 ನವೆಂಬರ್ 2023, 11:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

(ಕೃಪೆ–ಪಿಟಿಐ)

ದೌಸಾ(ರಾಜಸ್ಥಾನ): ಅಪ್ರಾಪ್ತ ಬಾಲಕಿ ಮೇಲೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ‌ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ ದೌಸಾದಲ್ಲಿ ಜಿಲ್ಲೆಯ ಲಾಲ್ಸೋಟ್ ಪ್ರದೇಶದಲ್ಲಿ ನಡೆದಿದೆ.

ADVERTISEMENT

‘ಭೂಪೇಂದ್ರ ಸಿಂಗ್ ಎಂದು ಗುರುತಿಸಲಾದ ಆರೋಪಿ ಸಬ್ ಇನ್ಸ್‌ಪೆಕ್ಟರ್ 4 ವರ್ಷದ ಬಾಲಕಿಯನ್ನು ಶುಕ್ರವಾರ ಮಧ್ಯಾಹ್ನ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ' ಎಂದು ಎಎಸ್‌ಪಿ ರಾಮಚಂದ್ರ ಸಿಂಗ್ ನೆಹ್ರಾ ಪಿಟಿಐಗೆ ತಿಳಿಸಿದ್ದಾರೆ.

ಸಾರ್ವಜನಿಕರಿಂದ ಭಾರಿ ಆಕ್ರೋಶ:

ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆಯುವ ಮೊದಲು ಸ್ಥಳೀಯ ನಿವಾಸಿಗಳು ಥಳಿಸಿದ್ದಾರೆ. ಬಳಿಕ ರಾಹುವಾಸ್ ಠಾಣೆಗೆ ಮುತ್ತಿಗೆ ಹಾಕಿ, ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸಂಸದ ಭೇಟಿ:

ಸ್ಥಳಕ್ಕೆ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಇದರಿಂದ ಜನ ರೊಚ್ಚಿಗೆದ್ದಿದ್ದಾರೆ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಹೇಯ ಕೃತ್ಯ. ಮುಗ್ಧ ಮಗುವಿಗೆ ನ್ಯಾಯ ದೊರಕಿಸಲು ನಾನು ಸ್ಥಳಕ್ಕೆ ಬಂದಿದ್ದೇನೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ' ಎಂದರು.

ಅಲ್ಲದೇ ಸಂತ್ರಸ್ತ ಮಗುವಿನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಸಿಎಂ ಅಶೋಕ್ ಗೆಹಲೋತ್‌ ಸರ್ಕಾರದ ಅದಕ್ಷತೆಯಿಂದ ನಿರಂಕುಶ ಪ್ರಭುತ್ವ ಸಾಧಿಸಿರುವ ಪೊಲೀಸರು ಚುನಾವಣೆಯಂತಹ ಸೂಕ್ಷ್ಮ ಸಂದರ್ಭದಲ್ಲೂ ದೌರ್ಜನ್ಯ ಎಸಗಲು ಹಿಂದೇಟು ಹಾಕುತ್ತಿಲ್ಲ ಎಂದು ಮೀನಾ ಆರೋಪಿಸಿದರು.

ಎಸ್‌ಐ ವಜಾಗೊಳಿಸಲು ಆದೇಶ:

'ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಆರೋಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ವಜಾಗೊಳಿಸಲು ಆದೇಶ ನೀಡಲಾಗಿದೆ'ಎಂದು ಡಿಜಿಪಿ ಉಮೇಶ್ ಮಿಶ್ರಾ ತಿಳಿಸಿದ್ದಾರೆ.

ಗೆಹಲೋತ್‌ ಸರ್ಕಾರಕ್ಕೆ ನೋಟಿಸ್:

ದೌಸಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಈ ಸಂಬಂಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (NCPCR) ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಅವರು ರಾಜಸ್ಥಾನ ಸರ್ಕಾರಕ್ಕೆ ನೋಟಿಸ್ ನೀಡಿದ್ದಾರೆ. ಘಟನೆಯ ಬಗ್ಗೆ ನಮಗೆ ಬಂದಿರುವ ಪ್ರಾಥಮಿಕ ಮಾಹಿತಿಯಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.