ಛತ್ರಪತಿ ಸಂಭಾಜೀನಗರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಘಾಟ್‌ನಂದೂರ್‌ನ ಮೂರು ಮತಗಟ್ಟೆಗಳಲ್ಲಿ ದಾಂದಲೆ ನಡೆಸಿದ ಮತ್ತು ಇವಿಎಂಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಪೊಲೀಸರು ಸುಮಾರು 40 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪರ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಛತ್ರಪತಿ ಸಂಭಾಜೀನಗರದಿಂದ ಸುಮಾರು 220 ಕಿ.ಮೀ. ದೂರದಲ್ಲಿರುವ ಅಂಬಾಜೊಗಾಯ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದೆ.
‘ಮಹಾ ವಿಕಾಸ ಆಘಾಡಿ (ಎಂವಿಎ) ಮೈತ್ರಿಕೂಟದ ಸ್ಥಳೀಯ ಮುಖಂಡ ಮಾಧವ್ ಜಾಧವ್ ಅವರನ್ನು ಪರ್ಲಿ ವಿಧಾನಸಭಾ ವ್ಯಾಪ್ತಿಯ ಕನೇರ್ವಾಡಿ ಗ್ರಾಮದಲ್ಲಿ ಕೆಲವರು ಥಳಿಸಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಅದರ ಬೆನ್ನಲ್ಲೇ 50ರಿಂದ 60 ಮಂದಿಯ ಗುಂಪು ದೊಣ್ಣೆ ಹಾಗೂ ಹರಿತವಾದ ಆಯಧಗಳೊಂದಿಗೆ ಮೂರು ಮತಗಟ್ಟೆಗಳಿಗೆ ನುಗ್ಗಿ ದಾಂದಲೆ ನಡೆಸಿದೆ. ಬುಧವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ನಡೆದಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
‘ಮತಗಟ್ಟೆಯ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಮೇಲೂ ದಾಳಿಕೋರರು ಹಲ್ಲೆ ನಡೆಸಿದ್ದು, ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಈ ಮತಗಟ್ಟೆಗಳ ಇವಿಎಂಗಳನ್ನೂ ಹಾನಿಗೊಳಿಸಿದ್ದಾರೆ. ಅಧಿಕಾರಿಗಳು ಹಾನಿಗೊಳಗಾದ ಇವಿಎಂಗಳನ್ನು ತಕ್ಷಣವೇ ಬದಲಾಯಿಸಿದ ಕಾರಣ ಮತದಾನ ಪ್ರಕ್ರಿಯೆಗೆ ಅಡ್ಡಿ ಉಂಟಾಗಲಿಲ್ಲ‘ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.