ADVERTISEMENT

ಬಿಜೆಪಿಯಿಂದ ಎಎಪಿಯ 40 ಶಾಸಕರಿಗೆ ತಲಾ ₹20 ಕೋಟಿ ಆಮಿಷ: ಆರೋಪ

ಪಿಟಿಐ
Published 25 ಆಗಸ್ಟ್ 2022, 8:13 IST
Last Updated 25 ಆಗಸ್ಟ್ 2022, 8:13 IST
ಎಎಪಿ ಮುಖ್ಯ ವಕ್ತಾರ ಸೌರಭ್‌ ಭಾರದ್ವಾಜ್‌
ಎಎಪಿ ಮುಖ್ಯ ವಕ್ತಾರ ಸೌರಭ್‌ ಭಾರದ್ವಾಜ್‌   

ನವದೆಹಲಿ: ದೆಹಲಿಯ ಎಎಪಿ ಪಕ್ಷದ 40 ಶಾಸಕರಿಗೆ ಬಿಜೆಪಿ ತಲಾ ₹20 ಕೋಟಿ ಆಮಿಷ ಒಡ್ಡಿದೆ ಎಂದು ಗಂಭೀರ ಆರೋಪವನ್ನು ಮಾಡಲಾಗಿದೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ದೂರಲಾಗಿದೆ.

40 ಶಾಸಕರನ್ನು ಮಾತ್ರವಲ್ಲ, ಪಕ್ಷದ ಎಲ್ಲ 62 ಶಾಸಕರನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡಿದೆ ಎಂದು ಎಎಪಿ ಆರೋಪಿಸಿದೆ.

ಸಭೆಯು ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಕೇಜ್ರಿವಾಲ್‌ ಸೇರಿದಂತೆ ಒಟ್ಟು 53 ಶಾಸಕರು ಉಪಸ್ಥಿತರಿದ್ದರು. ಸಚಿವ ಸತ್ಯೇಂದ್ರ ಜೈನ್‌ ಜೈಲಿನಲ್ಲಿರುವುದರಿಂದ ಸಭೆಗೆ ಗೈರಾಗಿದ್ದರು. ಉಳಿದಂತೆ 7 ಶಾಸಕರು ಸಭೆಯಿಂದ ಹೊರಗೆ ಉಳಿದಿದ್ದರು. ಈ ಪೈಕಿ ಓಕ್ಲಾ ಶಾಸಕ ಅಮಾನತುಲ್ಲಾ ಖಾನ್‌ ಅವರು ದೂರವಾಣಿ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಎಎಪಿ ಮುಖ್ಯ ವಕ್ತಾರ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ADVERTISEMENT

ಸಭೆ ಬಳಿಕ ಎಎಪಿಯ ಎಲ್ಲ ಶಾಸಕರು ರಾಜ್‌ಘಾಟ್‌ನಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಭೇಟಿ ನೀಡಿ, ಬಿಜೆಪಿಯ 'ಆಪರೇಷನ್‌ ಕಮಲ' ವಿಫಲಗೊಳ್ಳಲು ಪ್ರಾರ್ಥನೆ ಸಲ್ಲಿಸಿದ್ದಾರೆ.

ಸಭೆಗೂ ಮುನ್ನ ಕೆಲವು ದಿನಗಳಿಂದ ಎಎಪಿಯ 12 ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿತ್ತು.

40 ಶಾಸಕರಿಗೆ ತಲಾ ₹20 ಕೋಟಿಯಂತೆ ₹800 ಕೋಟಿ ಆಮಿಷ ಒಡ್ಡಲು ದುಡ್ಡು ಎಲ್ಲಿಂದ ಬಂದಿದೆ ಎಂಬುದನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆ ನಡೆಸಬೇಕು ಎಂದು ಭಾರದ್ವಾಜ್‌ ಒತ್ತಾಯಿಸಿದ್ದಾರೆ.

ಎಎಪಿ ಶಾಸಕರನ್ನು ಸೆಳೆಯುವ ಪ್ರಯತ್ನದ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಇದೊಂದು ಕೇಜ್ರಿವಾಲ್‌ ನೇತೃತ್ವದ ಸಾರ್ವಜನಿಕ ನೌಟಂಕಿ ನಡೆ ಎಂದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.