ಗುವಾಹಟಿ: ಅಸ್ಸಾಂನಲ್ಲಿ ಒಂದೇ ತಿಂಗಳಲ್ಲಿ 4,300 ಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 889 ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಜಿ.ಪಿ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಫೆಬ್ರುವರಿ 3ರಿಂದ ಬಾಲ್ಯ ವಿವಾಹದ ವಿರುದ್ಧ ಕಠಿಣ ಕಾನೂನು ಕ್ರಮವನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಫೆಬ್ರುವರಿ 28ರವರೆಗೆ ಒಟ್ಟು 4,300 ಪ್ರಕರಣಗಳು ದಾಖಲಾಗಿದೆ. ಈ ಪ್ರಕರಣ ಸಂಬಂಧ 3,145 ಜನರನ್ನು ಬಂಧಿಸಲಾಗಿದೆ ಎಂದು ಜಿ.ಪಿ ಸಿಂಗ್ ವಿವರಿಸಿದ್ದಾರೆ.
2026ರ ವೇಳೆಗೆ ಬಾಲ್ಯ ವಿವಾಹವನ್ನು ತೊಡೆದುಹಾಕಲು ಸಲುವಾಗಿ ರಾಜ್ಯ ಬಜೆಟ್‌ನಲ್ಲಿ ‘ರಾಜ್ಯ ಮಿಷನ್’ ಯೋಜನೆಯಡಿ ₹200 ಕೋಟಿ ಮಂಜೂರು ಮಾಡಲಾಗಿದೆ ಎಂದು ರಾಜ್ಯ ಹಣಕಾಸು ಸಚಿವ ಅಜಂತಾ ನಿಯೋಗ್ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ತಾಯಿ ಮತ್ತು ಶಿಶು ಮರಣ ಪ್ರಮಾಣ ಹೆಚ್ಚಿದ್ದು, ಬಾಲ್ಯ ವಿವಾಹವೇ ಮುಖ್ಯ ಕಾರಣ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್ಎಫ್‌ಎಚ್‌ಎಸ್) ವರದಿಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.