ಅಮರಾವತಿ: ಆಂಧ್ರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಸುಮಾರು 4.5 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 31,238 ಜನರನ್ನು 166 ರಕ್ಷಣಾ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಎನ್‌ಟಿಆರ್, ಗುಂಟೂರು, ಕೃಷ್ಣಾ, ಏಲೂರು, ಪಲ್ನಾಡು, ಬಾಪಟ್ಲಾ ಮತ್ತು ಪ್ರಕಾಶಂ ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ಪ್ರಕಟಣೆ ಹೇಳಿದೆ.
20 ರಾಜ್ಯ ವಿಪತ್ತು ನಿರ್ವಹಣಾ ಪಡೆ ಮತ್ತು 19 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಇನ್ನೂ 2 ಎಸ್‌ಡಿಆರ್‌ಎಫ್ ಮತ್ತು 9 ಎನ್‌ಡಿಆರ್‌ಎಫ್ ತಂಡಗಳು ವಿಜಯವಾಡಕ್ಕೆ ತೆರಳುತ್ತಿವೆ. ಗುಂಟೂರು ಮತ್ತು ಎನ್‌ಟಿಆರ್ ಜಿಲ್ಲಾಡಳಿತಗಳ ಕೋರಿಕೆ ಮೇರೆಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲು ಭಾರತೀಯ ನೌಕಾಪಡೆ ಒಪ್ಪಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಸಿಲುಕಿರುವ ಸಂತ್ರಸ್ತರನ್ನು ಏರ್‌ಲಿಫ್ಟ್ ಮಾಡಲು 10 ಎನ್‌ಡಿಆರ್‌ಎಫ್ ತಂಡ ಮತ್ತು 40 ಮೋಟಾರ್ ಬೋಟ್‌ಗಳೊಂದಿಗೆ, ಆರು ಹೆಲಿಕ್ಟಾಪರ್‌ಗಳನ್ನು ಕಳುಹಿಸುವಂತೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಪ್ರವಾಹದಿಂದಾಗಿ ರಸ್ತೆಗಳು ಹಾನಿಗೊಳಗಾಗಿದ್ದು, ಸಂಪರ್ಕ ಕಡಿತಗೊಂಡಿದೆ. 38 ಮೀನುಗಾರಿಕಾ ದೋಣಿಗಳಿಗೆ ಹಾನಿಯಾಗಿದೆ. 20 ಮರಗಳು ಧರೆಗುರುಳಿವೆ. 20 ಜಿಲ್ಲೆಗಳ 1.5 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಜತೆಗೆ 13,920 ಹೆಕ್ಟೇರ್ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಮೂರು ದಿನಗಳಲ್ಲಿ ಮಳೆ ಸಂಬಂಧಿತ ಅವಘಡಗಳಲ್ಲಿ ರಾಜ್ಯದಲ್ಲಿ 15 ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.