ಹೈದರಾಬಾದ್: ತೆಲಂಗಾಣ ವಿಧಾನಸಭೆಗೆ ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ 119 ಸ್ಥಾನಗಳಿಗೆ ಒಟ್ಟು 4,798 ಅಭ್ಯರ್ಥಿಗಳು 5,716 ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನವೆಂಬರ್ 13ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ನವೆಂಬರ್ 15 ಕೊನೆಯ ದಿನ.
ಗಜ್ವೇಲ್ ವಿಧಾನಸಭಾ ಕ್ಷೇತ್ರದಲ್ಲಿ ಗರಿಷ್ಠ 145 ಅಭ್ಯರ್ಥಿಗಳು ಇದ್ದಾರೆ. ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಗಜ್ವೇಲ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದಾರೆ. ಬಿಜೆಪಿ ಮುಖಂಡ ಈಟೆಲ ರಾಜೇಂದ್ರ ಅಲ್ಲಿಂದ ನಾಮಪತ್ರ ಸಲ್ಲಿಸಿದ ಪ್ರಮುಖರ ಪೈಕಿ ಒಬ್ಬರು.
ರಾವ್ ಸ್ಪರ್ಧಿಸುತ್ತಿರುವ ಮತ್ತೊಂದು ಕ್ಷೇತ್ರವಾದ ಕಾಮಾರೆಡ್ಡಿಯಲ್ಲಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ. ರೇವಂತ್ ರೆಡ್ಡಿ ಸೇರಿದಂತೆ 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೆಡ್ಚಾಲ್ ಕ್ಷೇತ್ರದಲ್ಲಿ 116 ಅಭ್ಯರ್ಥಿಗಳು ಹಾಗೂ ನಾರಾಯಣಪೇಟ್‌ನಲ್ಲಿ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಬಿಆರ್‌ಎಸ್ ಕಾರ್ಯಕಾರಿ ಅಧ್ಯಕ್ಷ, ಸಚಿವ ಕೆ.ಟಿ.ರಾಮರಾವ್ ಪ್ರತಿನಿಧಿಸುವ ಸಿರಿಸಿಲ್ಲ ಕ್ಷೇತ್ರದಲ್ಲಿ 36 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ, ಸಿದ್ದಿಪೇಟೆಯಲ್ಲಿ ಹಣಕಾಸು ಸಚಿವ ಟಿ.ಹರೀಶ್ ರಾವ್ ಸೇರಿದಂತೆ 62 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಆಡಳಿತಾರೂಢ ಬಿಆರ್‌ಎಸ್ ಎಲ್ಲ 119 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸುತ್ತಿದೆ. ಕಾಂಗ್ರೆಸ್ 118 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಮತ್ತು ಉಭಯ ಪಕ್ಷಗಳ ನಡುವಿನ ಹೊಂದಾಣಿಕೆಯ ಭಾಗವಾಗಿ ಸಿಪಿಐಗೆ ಒಂದು ಸ್ಥಾನ ಬಿಟ್ಟುಕೊಟ್ಟಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಮಿತ್ರ ಪಕ್ಷವಾದ ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಒಂಬತ್ತು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.
ಬಿಜೆಪಿ 111 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಎಂಟು ಸ್ಥಾನಗಳನ್ನು ತನ್ನ ಎನ್‌ಡಿಎ ಮಿತ್ರ ಪಕ್ಷ ಪವನ್ ಕಲ್ಯಾಣ್ ಅವರ ಜನಸೇನಾಗೆ ಬಿಟ್ಟುಕೊಟ್ಟಿದೆ. ಚುನಾವಣೆಗೆ ಸಂಬಂಧಿಸಿದಂತೆ ಈವರೆಗೆ ನಗದು ಸೇರಿದಂತೆ ₹544 ಕೋಟಿ ಮೌಲ್ಯದ ವಸ್ತುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.