ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಗೆ ₹50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದೆವು. ಆದರೆ ಹಣ ಸಿಗದ ಕಾರಣ ಕೊಲೆ ಮಾಡುವ ನಿರ್ಧಾರದಿಂದ ಹಿಂದೆ ಸರಿದೆವು ಎಂದು ಹತ್ಯೆಗೆ ಸಹಕಾರ ನೀಡಿದ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳು ಹೇಳಿದ್ದಾರೆ. ಸಿದ್ದೀಕಿ ಹತ್ಯೆಯಾಗುವವರೆಗೂ ಇವರು ಶೂಟರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ದೀಕಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆರೋಪಿಗಳು, ಸಿದ್ದೀಕಿ ಅವರನ್ನು ಕೊಲ್ಲಲು ಮಧ್ಯವರ್ತಿಯಿಂದ ₹ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದೆವು. ಆದರೆ ಹಣ ಸಿಗದ ಕಾರಣ ನಮ್ಮ ನಿರ್ಧಾರದಿಂದ (ಸಿದ್ದೀಕಿ ಹತ್ಯೆ) ಹಿಂದೆ ಸರಿದಿದ್ದೆವು. ಅಲ್ಲದೇ ಸಿದ್ದೀಕಿ ಪ್ರಭಾವಿ ರಾಜಕಾರಣಿಯಾಗಿರುವುದರಿಂದ ಅವರನ್ನು ಕೊಲ್ಲುವುದು ನಮಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂಬುದನ್ನು ಅರಿತಿದ್ದೆವು ಎಂದು ಬಾಯ್ಬಿಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೂಟರ್‌ಗಳಿಗೆ ಬಂದೂಕು, ಹಣಕಾಸು ಮತ್ತು ಇತರೆ ಲಾಜಿಸ್ಟಿಕ್ಸ್ ನೆರವು ನೀಡಿದ ಆರೋಪದ ಮೇಲೆ ನಗರ ಪೊಲೀಸ್‌ನ ಅಪರಾಧ ವಿಭಾಗವು ಶುಕ್ರವಾರ ಐವರು ಆರೋಪಿಗಳನ್ನು ಬಂಧಿಸಿದೆ. ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾ ಪ್ರದೇಶದ ನಿರ್ಮಲ್ ನಗರದಲ್ಲಿರುವ ಶಾಸಕ ಜೀಶನ್ ಸಿದ್ದೀಕಿ ಅವರ ಕಚೇರಿ ಬಳಿ ಬಾಬಾ ಸಿದ್ದೀಕಿ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಪ್ರಕರಣದ ಪ್ರಮುಖ ಶೂಟರ್ ಶಿವಕುಮಾರ್ ಗೌತಮ್, ಶುಭಂ ಲೋಂಕರ್ ಮತ್ತು ಮೊಹಮ್ಮದ್ ಜೀಶಾನ್ ಅಖ್ತರ್ ಪರಾರಿಯಾಗಿದ್ದಾರೆ. ಈ ಮೂವರ ವಿರುದ್ಧ ಪೊಲೀಸರು ಲುಕ್‌ಔಟ್ ನೋಟಿಸ್ (ಎಲ್‌ಒಸಿ) ಹೊರಡಿಸಿದ್ದಾರೆ.
ಬಾಬಾ ಸಿದ್ದೀಕಿ ಹತ್ಯೆಯು ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದೆ. ಅದರಲ್ಲೂ, ಸಿದ್ದೀಕಿ ಅವರ ಹತ್ಯೆಯ ಹೊಣೆಯನ್ನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡ ಹೊತ್ತುಕೊಂಡಿರುವುದು ಪ್ರಕರಣವನ್ನು ಮತ್ತಷ್ಟು ನಿಗೂಢಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.