ADVERTISEMENT

‘ಹೆಚ್ಚುವರಿ’ ನೆಪವೊಡ್ಡಿ ಬಾರಾಮತಿಗೆ ನೀರು ಪೂರೈಕೆ ಸ್ಥಗಿತಕ್ಕೆ ಚಿಂತನೆ

ಶರದ್‌ ಪವಾರ್‌ ವರ್ಚಸ್ಸು ಕುಂದಿಸುವ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 20:00 IST
Last Updated 5 ಜೂನ್ 2019, 20:00 IST

ಮುಂಬೈ (ಪಿಟಿಐ): ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಅವರ ಕ್ಷೇತ್ರಬಾರಾಮತಿಗೆ ರಾಜಕೀಯ ಒತ್ತಡದಿಂದ ಕೃಷಿ ಚಟುವಟಿಕೆಗೆ ‘ಹೆಚ್ಚುವರಿ’ ನೀರು ಪೂರೈಕೆ ಆಗುತ್ತಿದೆ ಎಂದು ಕಾರಣ ನೀಡಿ ‘ಹೆಚ್ಚುವರಿ’ ನೀರು ಪೂರೈಕೆಯನ್ನು ಕಡಿತಗೊಳಿಸಲು ಮಹಾರಾಷ್ಟ್ರ ಸರ್ಕಾರ ಚಿಂತನೆ ನಡೆಸಿದೆ.

ಪುಣೆ ಜಿಲ್ಲೆಯ ಬಾರಾಮತಿ ಹಾಗೂ ಇಂದಾ‍ಪುರ ತಾಲ್ಲೂಕುಗಳಿಗೆ ಹರಿದು ಹೋಗುತ್ತಿರುವ ‘ಹೆಚ್ಚುವರಿ’ ನೀರನ್ನು ಬರಗಾಲ ಪೀಡಿತ ಪಕ್ಕದ ಸತಾರ ಜಿಲ್ಲೆಗೆ ಹರಿಸಬಹುದು ಎಂದು ಸರ್ಕಾರ ಕಾರಣ ನೀಡಿದೆ.

ಇಂದಾಪುರವು ಕಾಂಗ್ರೆಸ್‌ನ ಹರ್ಷವರ್ಧನ್‌ ಪಾಟೀಲ್‌ ಅವರ ಭದ್ರಕೋಟೆ ಆಗಿದೆ.

ADVERTISEMENT

‘ಬಾರಾಮತಿ ಹಾಗೂ ಇಂದಾಪುರ ತಾಲ್ಲೂಕುಗಳಿಗೆ ಹೆಚ್ಚುವರಿಯಾಗಿ ಹರಿಯುತ್ತಿರುವ ನೀರನ್ನು ಪಕ್ಕದ ಬರ ಪೀಡಿತ ಸತಾರ ಜಿಲ್ಲೆಗೆ ಹರಿಸಬಹುದಾಗಿದೆ. ಕೆಲವು ಪ್ರದೇಶಗಳಿಗೆ ಹೆಚ್ಚುವರಿ ನೀರು ಹರಿಸಿ ಬೇರೆ ಪ್ರದೇಶದವರಿಗೆ
ವಂಚನೆ ಮಾಡಲು ಬರುವುದಿಲ್ಲ’ ಎಂದು
ರಾಜ್ಯದ ಜಲ ಸಂಪನ್ಮೂಲ ಸಚಿವ ಗಿರೀಶ್‌ ಮಹಾಜನ್‌ ಬುಧವಾರ ಹೇಳಿದರು.

ಸೆಪ್ಟೆಂಬರ್‌– ಅಕ್ಟೋಬರ್‌ನಲ್ಲಿ
ನಡೆಯಲಿರುವ ಮಹಾರಾಷ್ಟ್ರ ವಿಧಾನ
ಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಹಾಗೂಶರದ್‌ ಪವಾರ್‌, ಅವರ ಸೋದರಳಿಯ ಅಜಿತ್‌ ಪವಾರ್‌ ಅವರನ್ನು ಪುಣೆ ಜಿಲ್ಲೆಯ ಅವರ ಕ್ಷೇತ್ರದಲ್ಲೇ ವರ್ಚಸ್ಸು ಕುಂದಿಸುವ ಉದ್ದೇಶದಿಂದ ಸರ್ಕಾರ ಈ ಚಿಂತನೆ ನಡೆಸಿದೆ ಎನ್ನಲಾಗಿದೆ.

ಜಲ ಸಂಪನ್ಮೂಲ ಸಚಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಜಿತ್‌ ಪವಾರ್‌, ‘ಸಚಿವರು ಈ ರೀತಿಯ ಆದೇಶವನ್ನು ನಿಜ
ವಾಗಿಯೂ ನೀಡಿದ್ದಾರೆಯೇ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ನೀರು ಎಲ್ಲರಿಗೂ ಸೇರಿದ್ದು. ರಾಜ್ಯ ಸರ್ಕಾರ ಅಧಿಕೃತವಾಗಿ ನಿರ್ಧಾರ ಹೊರ ಹಾಕುವವರೆಗೂ ಕಾಯುವೆ’ ಎಂದಿದ್ದಾರೆ.

ಹರ್ಷವರ್ಧನ್‌ ಪಾಟೀಲ್‌ ಮಾತನಾಡಿ, ‘ಬೇರೆ ಪ್ರದೇಶದ ರೈತರನ್ನು ತೋರಿಸಿ, ಇನ್ನೊಂದು ಪ್ರದೇಶದ ರೈತರಿಗೆ ಸಿಗಬೇಕಾಗಿರುವ ನೀರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಇಂದಾಪುರಕ್ಕೆ ಹರಿಯುತ್ತಿರುವ ನೀರು ಇಂದಾಪುರ ಭಾಗಕ್ಕೆ ಸೇರಿದ್ದಾಗಿದೆ. ನೀರನ್ನು ನಿಲ್ಲಿಸಬಾರದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.