ADVERTISEMENT

J&K ವಿಧಾನಸಭೆಗೆ ಐವರ ನಾಮಕರಣ: ಚರ್ಚೆಗೆ ಗ್ರಾಸವಾದ ಲೆಫ್ಟಿನಂಟ್ ಗವರ್ನರ್ ನಡೆ

ಪಿಟಿಐ
Published 7 ಅಕ್ಟೋಬರ್ 2024, 13:59 IST
Last Updated 7 ಅಕ್ಟೋಬರ್ 2024, 13:59 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್ ಮನೋಜ್‌ ಸಿನ್ಹಾ</p></div>

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್ ಮನೋಜ್‌ ಸಿನ್ಹಾ

   

ಜಮ್ಮು: ಜಮ್ಮು–ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೂ ಮೊದಲೇ ವಿಧಾನಸಭೆಗೆ ಐದು ಸದಸ್ಯರನ್ನು ನಾಮನಿರ್ದೇಶನ ಮಾಡಲು ಲೆಫ್ಟಿನಂಟ್‌ ಗವರ್ನರ್ (ಎಲ್‌ಜಿ) ತೀರ್ಮಾನಿಸಿದ್ದು, ಈ ನಡೆಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

ಲೆಫ್ಟಿನಂಟ್‌ ಗವರ್ನರ್‌ರಿಂದ ನಾಮನಿರ್ದೇಶನ ಆಗಲಿರುವ ಐವರು ಸದಸ್ಯರು ಹೊಸ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಂಭವವಿದೆ. ಇದೇ ಕಾರಣದಿಂದ ಎಲ್‌ಜಿ ನಡೆಯನ್ನು ಕಾಂಗ್ರೆಸ್‌, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ತೀವ್ರವಾಗಿ ವಿರೋಧಿಸಿವೆ.

ADVERTISEMENT

ಮೂಲಗಳ ಪ್ರಕಾರ, ಕೇಂದ್ರ ಗೃಹ ಸಚಿವಾಲಯದ ಸಲಹೆಯನ್ನು ಆಧರಿಸಿ ಐವರು ಸದಸ್ಯರನ್ನು ಎಲ್‌ಜಿ ನಾಮನಿರ್ದೇಶನ ಮಾಡುವರು. ಈ ಸದಸ್ಯರು ನೂತನ ಸರ್ಕಾರ ರಚನೆಯಲ್ಲಿ ನಿರ್ಣಾಯಕವಾದ ಪಾತ್ರವನ್ನು ವಹಿಸಲಿದ್ದಾರೆ. 

ಪ್ರಸ್ತುತ, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಸದಸ್ಯ ಬಲ 90 ಆಗಿದೆ. ಐವರ ನಾಮ ನಿರ್ದೇಶನಗೊಂಡಲ್ಲಿ ಸದಸ್ಯ ಬಲ 95ಕ್ಕೆ ಏರಲಿದೆ. ಸರ್ಕಾರ ರಚನೆಗೆ 48 ಸದಸ್ಯರ ಸರಳ ಬಹುಮತ ಅಗತ್ಯವಾಗಿರಲಿದೆ.

ಸರ್ಕಾರ ರಚನೆಗೆ ಮೊದಲೇ ವಿಧಾನಸಭೆಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ನಡೆಯ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸುಳಿವನ್ನು ನೀಡಿವೆ. ಸಂವಿಧಾನದ ವಿಧಿ 370ರ ಅನ್ವಯ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನವನ್ನು ಹಿಂಪಡೆದ ಬಳಿಕ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ರೂಪಿಸಲಾಗಿದೆ.  

ಜಮ್ಮು ಮತ್ತು ಕಾಶ್ಮೀರ ಪುನರ್ರಚನಾ ಕಾಯ್ದೆ 2019ರ, ಸೆಕ್ಷನ್‌ 14 ಉಪ ನಿಯಮ (30)ರ ಅನ್ವಯ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನಂಟ್‌ ಗವರ್ನರ್ ಅವರು ಇಬ್ಬರನ್ನು ನಾಮನಿರ್ದೇಶನ ಮಾಡಬಹುದು. ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ತಾವು ಭಾವಿಸಿದಲ್ಲಿ ಈ ಮೂಲಕ ಆ ಕೊರತೆ ತುಂಬಬಹುದು’ ಎಂದಿದೆ. ಈ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ತರಲಾಗಿದೆ.

ತಿದ್ದುಪಡಿ ಬಳಿಕ, 15ಎ ಉಪ ನಿಯಮದ ಅನುಸಾರ, ಲೆಫ್ಟಿನಂಟ್ ಗವರ್ನರ್ ಅವರು ಇಬ್ಬರಿಗಿಂತಲೂ ಹೆಚ್ಚು ಸದಸ್ಯರನ್ನು ನಾಮನಿರ್ದೇಶನ ಮಾಡಲಾಗದು. ಇಬ್ಬರಲ್ಲಿ ಒಬ್ಬರು ಕಾಶ್ಮೀರಿ ವಲಸಿಗ ಸಮುದಾಯಕ್ಕೆ ಸೇರಿದ ಮಹಿಳೆ ಆಗಿರಬೇಕು. ಉಪ ನಿಯಮ 15ಬಿ ಅನುಸಾರ ಪಾಕ್‌ ಆಕ್ರಮಿತ ಕಾಶ್ಮೀರ ಭಾಗದಿಂದ ವಲಸೆ ಬಂದಿರುವ ವ್ಯಕ್ತಿಯೊಬ್ಬರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಬಹುದು.

ರಾಜ್ಯಪಾಲರು ಈಗ ನಾಮನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿರುವ ಐವರು ಸದಸ್ಯರಿಗೂ ಚುನಾಯಿತ ಸದಸ್ಯರಿಗೆ ಇರುವಂತೆಯೇ ಮತದಾನದ ಹಕ್ಕು ಇರುತ್ತದೆ ಎಂದು ಮೂಲಗಳು ತಿಳಿಸಿವೆ. ಇದೇ ಕಾರಣಕ್ಕೆ ಕಾಂಗ್ರೆಸ್ ಸೇರಿದಂತೆ ‍ಪ್ರಮುಖ ಪ್ರತಿಪಕ್ಷಗಳು ಎಲ್‌ಜಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಇದು, ‘ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು’ ಎಂದು ಟೀಕಿಸಿದೆ.

‘ಒಂದು ವೇಳೆ ಅವರು ನಾಮನಿರ್ದೇಶನ ಮಾಡಿದರೆ ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಸೂತ್ರಧಾರ ಇರುವುದಾದರೆ ಸರ್ಕಾರ ರಚಿಸುವುದಕ್ಕೆ ಏನು ಅರ್ಥವಿದೆ? ಇದರ ವಿರುದ್ಧ ಹೋರಾಟ ನಡೆಸಬೇಕಿದೆ’ ಎಂದು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್‌ ಅಬ್ದುಲ್ಲಾ ಅವರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ. 

ನಾಮನಿರ್ದೇಶನ ಮಾಡುವ ನಿರ್ಧಾರವು ಮತಎಣಿಕೆಗೆ ಮೊದಲೇ ಜನಾದೇಶವನ್ನು ತಿರುಚುವ ಕೇಂದ್ರ ಸರ್ಕಾರದ ಯತ್ನವಾಗಿದೆ ಎಂದು ಪಿಡಿಪಿ ನಾಯಕಿ ಇಲ್ತಿಜಾ ಮುಫ್ತಿ ಎಂದು ಟೀಕಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯು ಸದ್ಯ, ಪುದುಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಮಾದರಿಯಲ್ಲೇ ಕಾರ್ಯನಿರ್ವಹಿಸಲಿದೆ. ಪುದುಚೇರಿಯಲ್ಲಿ ಮೂವರು ನಾಮನಿರ್ದೇಶನ ಸದಸ್ಯರಿದ್ದು, ಚುನಾಯಿತ ಸದಸ್ಯರಿಗೆ ಸಮಾನವಾಗಿ ಮತದಾನದ ಹಕ್ಕು ಹೊಂದಿದ್ದಾರೆ.

ಪುದುಚೇರಿ ಎಲ್‌ಜಿ ಆಗಿದ್ದ ಕಿರಣ್ ಬೇಡಿ, ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಶಿಫಾರಸಿಲ್ಲದೇ ಮೂವರು ಸದಸ್ಯರ ನಾಮನಿರ್ದೇಶನಕ್ಕೆ ತೀರ್ಮಾನಿಸಿದ್ದರು. ಇದನ್ನು ಮೊದಲು ಮದ್ರಾಸ್‌ ಹೈಕೋರ್ಟ್‌, ನಂತರ ಸುಪ್ರೀಂ ಕೋರ್ಟ್‌ನಲ್ಲಿ 2017–18ರಲ್ಲಿ ಪ್ರಶ್ನಿಸಲಾಗಿತ್ತು.

ಸರ್ಕಾರದ ಜೊತೆ ಚರ್ಚಿಸದೇ ಎಲ್‌ಜಿ ಸದಸ್ಯರನ್ನು ನಾಮನಿರ್ದೇಶನ ಮಾಡಲಾಗದು ಎಂಬುದು ಪುದುಚೇರಿ ಸರ್ಕಾರದ ವಾದವಾಗಿತ್ತು. ಆದರೆ  ಸುಪ್ರೀಂ ಕೋರ್ಟ್‌, ‘ಎಲ್‌ಜಿ ಅವರು ನಾಮನಿರ್ದೇಶನ ಮಾಡುವುದು ಕಾನೂನುಬಾಹಿರವಲ್ಲ’ ಎಂದು ಅಭಿಪ್ರಾಯಪಟ್ಟಿತ್ತು.

ಲೆಫ್ಟಿನೆಂಟ್‌ ಗವರ್ನರ್ ಅವರು ಈ ನಡೆಯಿಂದ ಹಿಂದೆ ಸರಿಯಬೇಕು. ನಾಮನಿರ್ದೇಶನ ಮಾಡಿ, ಈ ಪ್ರಸ್ತಾವವನ್ನು ಎಲ್‌ಜಿಗೆ ಕಳುಹಿಸಬೇಕಾದದ್ದು ಸರ್ಕಾರ.
–ಫಾರೂಕ್‌ ಅಬ್ದುಲ್ಲಾ, ಅಧ್ಯಕ್ಷ, ನ್ಯಾಷನಲ್‌ ಕಾನ್ಫರೆನ್ಸ್
ಐವರ ನಾಮನಿರ್ದೇಶನ ಮಾಡುವ ಲೆಫ್ಟಿನೆಂಟ್‌ ಗವರ್ನರ್ ಅವರ ನಡೆಯನ್ನು ಕಾಂಗ್ರೆಸ್‌ ವಿರೋಧಿಸಲಿದೆ. ಈ ಕ್ರಮವು ಜನಾದೇಶಕ್ಕೆ ವಿರುದ್ಧವಾಗಿದೆ.
–ರವೀಂದರ್‌ ಶರ್ಮಾ, ಜಮ್ಮು ಕಾಶ್ಮೀರ ಕಾಂಗ್ರೆಸ್‌ ಘಟಕದ ಉಪಾಧ್ಯಕ್ಷ, ವಕ್ತಾರ
ಎಲ್‌ಜಿ ನಾಮನಿರ್ದೇಶನ ಮಾಡುವ ಎಲ್ಲ ಐವರು ಬಿಜೆಪಿ ಸದಸ್ಯರು ಅಥವಾ ಆ ಪಕ್ಷದ ಜೊತೆಗೆ ಗುರುತಿಸಿಕೊಂಡವರೇ ಆಗಿರುತ್ತಾರೆ. ಇದೊಂದು ನಾಚಿಕೆಗೇಡಿನ ನಡೆ.
– ಇಲ್ತಿಜಾ ಮುಫ್ತಿ, ಪಿಡಿಪಿ ನಾಯಕಿ
ಅತಂತ್ರ ವಿಧಾನಸಭೆ ರಚನೆಯಗಬಹುದೆಂದು ಬಹುಮತ ಗಳಿಸಲು ಬಿಜೆಪಿಯು ಹತಾಶ ಯತ್ನ ನಡೆಸಿದೆ. ಕಾಂಗ್ರೆಸ್‌ ಮೈತ್ರಿಗೆ ಅಲ್ಲಿ ಜನಾದೇಶ ಸಿಗಲಿದೆ.
–ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.