ಸುಕ್ಮಾ (ಛತ್ತೀಸಗಢ): ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ಐವರು ನಕ್ಸಲರನ್ನು ಬಂಧಿಸಲಾಗಿದೆ. ಡಬಲ್ ಬ್ಯಾರೆಲ್ ಗ್ರೆನೆಡ್ ಲಾಂಚರ್ ಷೆಲ್ ಹಾಗೂ ಟಿಫನ್ ಬಾಂಬ್ ಸೇರಿ ಹಲವು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಜಗರಗುಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಿಲ್ಲಾ ಮೀಸಲು ಪಡೆ ಬಸ್ಟರ್ ಫೈಟರ್ಸ್ ಹಾಗೂ ಜಿಲ್ಲಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಇವರನ್ನು ಶನಿವಾರ ಬಂಧಿಸಲಾಗಿದೆ.
ಜಗರ್‌ಗುಂಡ ಸಮೀಪದ ಸಿಂಗವರಂನಲ್ಲಿ ನಕ್ಸಲರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿವೆ. ಸಿವಿಲ್ ಬಟ್ಟೆಯಲ್ಲಿದ್ದ ನಕ್ಸಲರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹೆಮ್ಲಾ ಪಾಲ (35), ಹೆಮ್ಲಾ ಹುಂಗಾ (35), ಸೊಡಿ ದೆವಾ (25), ನುಪ್ಪೊ (20) ಹಾಗೂ ಕುಂಜಂ ಮಸ (28) ಬಂಧಿತರು. ಇವರೆಲ್ಲಾ ಸಮೀಪದ ಚಿಂತಲ್‌ನರ್ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದವರು. ನಕ್ಸಲ್ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.
ನಾಡ ಬ್ಯಾರೆಲ್ ಗ್ರೆನೇಡ್ ಲಾಂಚರ್, ಶೆಲ್, ಒಂದು ಟಿಫನ್ ಬಾಂಬ್, ಏಳು ಜೆಲೆಟಿನ್ ರಾಡ್‌ಗಳು, 9 ಡಿಟೊನೆಟರ್‌ಗಳು, ಸ್ಫೋಟಕ ಹುಡಿ ಹಾಗೂ ಕಚ್ಚಾ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.