ADVERTISEMENT

ಕಾಶ್ಮೀರ: ಪೊಲೀಸರ ಮನೆಮಂದಿಯನ್ನು ಅಪಹರಿಸಿ ಉಗ್ರರ ಪ್ರತಿಕಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 8:39 IST
Last Updated 31 ಆಗಸ್ಟ್ 2018, 8:39 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಐವರು ಪೊಲೀಸರ ಕುಟುಂಬ ಸದಸ್ಯರನ್ನೇ ಅಪಹರಿಸುವ ಮೂಲಕ ಭದ್ರತಾ ಪಡೆಗಳಿಗೆ ಸವಾಲು ಹಾಕಿದ್ದಾರೆ. ಕುಖ್ಯಾತ ಉಗ್ರಸೈಯದ್ ಸಲಾಹುದ್ದೀನ್‌ನ ಎರಡನೇ ಮಗ ಮತ್ತು ಕೆಲ ಉಗ್ರರ ಸಂಬಂಧಿಕರ ಬಂಧನಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಭಯೋತ್ಪಾದಕರು ಪೊಲೀಸರ ಕುಟುಂಬ ಸದಸ್ಯರನ್ನು ಗುರಿಯಾಗಿಸಿದ್ದಾರೆ ಎಂದು ಮೂಲಗಳು ಹೇಳಿವೆ.

‘ಕಾಶ್ಮೀರಕ್ಕೆ ಉಗ್ರವಾದ ಕಾಲಿಟ್ಟ 28 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಉಗ್ರರು ಈ ರೀತಿ ಪೊಲೀಸರ ಕುಟುಂಬಗಳ ಮೇಲೆ ಸೇಡಿನ ಕೃತ್ಯ ಎಸಗಿದ್ದಾರೆ’ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಪೊಲೀಸರ ಅಪಹರಣವನ್ನು ಒತ್ತಡ ತಂತ್ರವಾಗಿ ಬಳಸಿಕೊಳ್ಳುತ್ತಿದ್ದ ಉಗ್ರರು ಇದೀಗ ಭದ್ರತಾ ಸಿಬ್ಬಂದಿಯ ಕುಟುಂಬದವರನ್ನು ಅಪಹರಿಸಲು ಮುಂದಾಗಿರುವುದು ಕಣಿವೆ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಾಗಬಹುದು ಎಂಬ ಆತಂಕವನ್ನು ಜನರಲ್ಲಿ ಮೂಡಿಸಿದೆ.

ಪೊಲೀಸರು ಈವರೆಗೆ ಉಗ್ರರ ಕೃತ್ಯಕ್ಕೆ ಸಂಬಂಧಿಸಿದಂತೆ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ‘ರಾಜ್ಯದ ವಿವಿಧೆಡೆ ಒಟ್ಟು ಐವರನ್ನು ಅಪಹರಿಸಲಾಗಿದೆ. ಇವರ ಕುಟುಂಬದ ಸದಸ್ಯರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಪಹೃತರದಲ್ಲಿ ಡಿವೈಎಸ್‌ಪಿ ಒಬ್ಬರ ಸೋದರನೂ ಸೇರಿದ್ದಾನೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ADVERTISEMENT

ಪುಲ್ವಾಮ, ಅನಂತ್‌ನಾಗ್, ಅವಂತಿಪುರ ಮತ್ತು ಕುಲ್ಗಾಂ ಜಿಲ್ಲೆಗಳಲ್ಲಿ ಪೊಲೀಸರ ಮನೆಗಳಿಗೆ ನುಗ್ಗಿರುವ ಉಗ್ರರು ಕುಟುಂಬ ಸದಸ್ಯರನ್ನು ಅಪಹರಿಸಿದ್ದಾರೆ.ಮಧ್ಯ ಕಾಶ್ಮೀರದ ಗಂಡರ್‌ಬಾಲ್ ಜಿಲ್ಲೆಯಲ್ಲಿ ಪೊಲೀಸ್‌ ಸಿಬ್ಬಂದಿಯ ಕುಟುಂಬ ಸದಸ್ಯನೊಬ್ಬನನ್ನು ಅಪಹರಿಸಿದ್ದ ಉಗ್ರರು ಚೆನ್ನಾಗಿ ಥಳಿಸಿ, ಮನೆಗೆ ಕಳಿಸಿದ್ದರು.

ಶೋಪಿಯಾನ್‌ನಲ್ಲಿ ನಾಲ್ವರು ಪೊಲೀಸರನ್ನು ಉಗ್ರರು ಕೊಂದುಹಾಕಿದ ನಂತರ ಭದ್ರತಾ ಸಿಬ್ಬಂದಿ ಆಕ್ರೋಶದಿಂದ ಉಗ್ರರಿಗೆ ಸೇರಿದ ನಾಲ್ಕು ಮನೆಗಳನ್ನು ಧ್ವಂಸಗೊಳಿಸಿ, ಅವರ ಸಂಬಂಧಿಕರನ್ನು ಬಂಧಿಸಿದ್ದರು. ಇದಕ್ಕೆ ಪ್ರತಿಕಾರ ರೀತಿಸಿಕೊಳ್ಳಲು ಉಗ್ರರು ಪೊಲೀಸರ ಸಂಬಂಧಿಕರನ್ನು ಅಪಹರಿಸಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.