ADVERTISEMENT

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ: ಎಐಸಿಸಿ ಕಚೇರಿ ಎದುರು ‘ಕಲರವ’

ಸ್ಪರ್ಧಾಕಾಂಕ್ಷಿಗಳಿಂದ ತುರುಸಿನ ಲಾಬಿ

ಸಿದ್ದಯ್ಯ ಹಿರೇಮಠ
Published 11 ಅಕ್ಟೋಬರ್ 2018, 20:15 IST
Last Updated 11 ಅಕ್ಟೋಬರ್ 2018, 20:15 IST
   

ನವದೆಹಲಿ: ಇಲ್ಲಿನ ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ (ಎಐಸಿಸಿ) ಕಚೇರಿ ಎದುರುನಾಲ್ಕು ವರ್ಷಗಳ ದೀರ್ಘ ಭಣಭಣದ ಬಳಿಕ ಕಳೆದ ಒಂದು ವಾರದಿಂದ ಕಾರ್ಯಕರ್ತರ ಕಲರವ ಕೇಳಿಬರುತ್ತಿದೆ. ರಾಜಕೀಯ ಮುಖಂಡರ ವಾಹನಗಳ ಸಾಲು ರಸ್ತೆಯುದ್ದಕ್ಕೂ ಕಂಡುಬರುತ್ತಿದೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಘೋಷಣೆ ಆಗಿದ್ದರಿಂದ ಟಿಕೆಟ್‌ಗಾಗಿ ಸ್ಪರ್ಧಾಕಾಂಕ್ಷಿಗಳ ಲಾಬಿ ತುರುಸಿನಿಂದ ನಡೆದಿದ್ದು, ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ ಪಕ್ಷದ ಕಚೇರಿಯು ಕಿಕ್ಕಿರಿದ ವಾತಾವರಣಕ್ಕೆ ಸಾಕ್ಷಿಯಾಗುತ್ತಿದೆ.

ಎಐಸಿಸಿ ಕಚೇರಿಯತ್ತ ದಾಂಗುಡಿ ಇಡುತ್ತಿರುವವರಲ್ಲಿ ನೆರೆಯ ಮಧ್ಯಪ್ರದೇಶ ಹಾಗೂ ರಾಜಸ್ಥಾನದ ಮುಖಂಡರು, ಅವರ ಬೆಂಬಲಿಗರು ಹೆಚ್ಚಾಗಿ ಇದ್ದು, ಟಿಕೆಟ್‌ಗಾಗಿ ರಾಷ್ಟ್ರೀಯ ನಾಯಕರ ಗಮನ ಸೆಳೆಯುತ್ತಿದ್ದಾರೆ.

ADVERTISEMENT

ಪಕ್ಷದ ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹ್ಲೋಟ್‌, ಸಂಸದ ಸಚಿನ್‌ ಪೈಲಟ್‌ ಸೇರಿದಂತೆ ರಾಜಸ್ಥಾನ ಪ್ರದೇಶ ಕಾಂಗ್ರೆಸ್‌ ಸಮಿತಿಯ ಪ್ರಮುಖ ಮುಖಂಡರು ಗುರುವಾರ ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದ್ದಾರೆ.

200 ಕ್ಷೇತ್ರಗಳ ರಾಜಸ್ಥಾನ ವಿಧಾನಸಭೆಗೆ ಡಿಸೆಂಬರ್‌ 7ರಂದು ಮತದಾನ ನಡೆಯಲಿದ್ದು, ಎಂದಿನಂತೆ ಪಕ್ಷವು ನಾಮಪತ್ರ ಸಲ್ಲಿಕೆಯ ಕೊನೆಯ ಕ್ಷಣವೇ ಟಿಕೆಟ್‌ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

2013ರಲ್ಲಿ ನಡೆದಿದ್ದ ಚುನಾವಣೆಯಲ್ಲಿ 163 ಕ್ಷೇತ್ರಗಳಲ್ಲಿ ಜಯಿಸಿ ಭಾರಿ ಬಹುಮತದೊಂದಿಗೆ ಗೆದ್ದಿದ್ದ ಬಿಜೆಪಿಯು ಆಡಳಿತವಿರೋಧಿ ಅಲೆಯ ಭೀತಿ ಎದುರಿಸುತ್ತಿದೆ. ಈ ಕಾರಣದಿಂದ ರಾಜ್ಯದಲ್ಲಿ ಮತ್ತೆ ಆಡಳಿತದ ಚುಕ್ಕಾಣಿ ಹಿಡಿಯುವ ಭರವಸೆ ಮೂಡಿರುವುದರಿಂದಲೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರಿ ಬೇಡಿಕೆ ಇದ್ದು, ತೀವ್ರ ಸ್ಪರ್ಧೆ ಕಂಡುಬಂದಿದೆ.

ಇನ್ನೊಂದೆಡೆ, ಮುಖ್ಯಮಂತ್ರಿ ವಸುಂಧರಾ ರಾಜೆಯವರ ಸೂಕ್ತ ಉತ್ತರಾಧಿಕಾರಿಯ ಅನ್ವೇಷಣೆಯಲ್ಲಿ ಬಿಜೆಪಿ ಮುಖಂಡರು ನಿರತ
ರಾಗಿದ್ದಾರೆ.

ಪಕ್ಷವು ಒಂದೊಮ್ಮೆ ಸರಳ ಬಹುಮತಕ್ಕೆ ಅಗತ್ಯವಿರುವ ಶತಕದ ಗಡಿ ದಾಟಿದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಘೋಷಿಸಲಾಗಿದ್ದರೂ ರಾಜೆ ಅವರ ಬದಲಿಗೆ ಬೇರೆಯವರಿಗೇ ಮಣೆ ಹಾಕುವ ಇರಾದೆ ಮುಖಂಡರದ್ದಾಗಿದೆ ಎಂಬ ವಿಷಯವೂ ಗುಟ್ಟಾಗಿ ಉಳಿದಿಲ್ಲ.

ಕೇಂದ್ರದ ಮಾನವ ಸಂಪನ್ಮೂಲ ಸಚಿವ ಪ್ರಕಾಶ ಜಾವಡೇಕರ್‌ ಅವರನ್ನು ಬಿಜೆಪಿಯು ರಾಜಸ್ಥಾನ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಿದೆ. ಕಳೆದ ಒಂದು ವಾರದಿಂದ ಜೈಪುರದಲ್ಲೇ ಬೀಡುಬಿಟ್ಟಿರುವ ಜಾವಡೇಕರ್‌, ಗುರುವಾರ ಸಚಿವಾಲಯದ ಸಭೆಯ ಅಂಗವಾಗಿ ನವದೆಹಲಿಗೆ ಭೇಟಿ ನೀಡಿದ್ದರಾದರೂ ಸಂಜೆಯ ವೇಳೆಗೆ ಮತ್ತೆ ವಾಪಸ್ಸಾಗಿದ್ದಾರೆ.

ಮಧ್ಯಪ್ರದೇಶ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕಮಲನಾಥ ಅವರೂ ಗುರುವಾರ ಹೈಕಮಾಂಡ್‌ನ ಕೆಲವು ಮುಖಂಡ
ರೊಂದಿಗೆ ಚರ್ಚೆ ನಡೆಸಿ 230 ಕ್ಷೇತ್ರಗಳ ಪೈಕಿ 128 ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿದ್ದಾಗಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.