ADVERTISEMENT

ಪಂಚರಾಜ್ಯ ಚುನಾವಣೆ ಫಲಿತಾಂಶ: ಬಿಜೆಪಿಗೆ ಹುಮ್ಮಸ್ಸು, ಕಾಂಗ್ರೆಸ್‌ಗೆ ಪಾಠ

ಕಮಲ ಮೇಲುಗೈ: ಬೊಮ್ಮಾಯಿ ನಾಯಕತ್ವಕ್ಕೆ ಬಲ

ವೈ.ಗ.ಜಗದೀಶ್‌
Published 11 ಮಾರ್ಚ್ 2022, 5:29 IST
Last Updated 11 ಮಾರ್ಚ್ 2022, 5:29 IST
   

ಐದು ರಾಜ್ಯಗಳ ಚುನಾವಣೆ ಫಲಿತಾಂಶವು ಕರ್ನಾಟಕದಲ್ಲಿ ಬಿಜೆಪಿ ನಾಯಕರ ಹೊಸ ಹುಮ್ಮಸ್ಸಿಗೆ ಕಾರಣವಾಗಿದ್ದರೆ, ಮುಂದಿನ ಸರ್ಕಾರ ತಮ್ಮದೇ ಎಂದು ಬೀಗಲಾರಂಭಿಸಿದ್ದ ಕಾಂಗ್ರೆಸ್‌ ತಲೆಯಾಳುಗಳಿಗೆ ಪಡಸಾಲೆಯಲ್ಲಿ ಪಟ್ಟಾಗಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದಿಗ್ಧತೆಯನ್ನು ತಂದಿತ್ತಿದೆ.

ತಳಮಟ್ಟದ ಸಂಘಟನೆ, ತತ್ವ ಆಧಾರಿತವಾಗಿ ಚುನಾವಣೆ ಎದುರಿಸಿ ಗೆದ್ದ ಪಶ್ಚಿಮ ಬಂಗಾಳದ ಟಿಎಂಸಿ, ಪಂಜಾಬಿನ ಎಎಪಿ, ತಮಿಳುನಾಡಿನ ಡಿಎಂಕೆ ದಾರಿಯಲ್ಲಿ ಸಾಗದೇ,ಕಾಂಗ್ರೆಸ್‌ ಸೋಲಿನಲ್ಲೇ ತನ್ನ ಗೆಲುವಿನ ‘ಶಕ್ತಿ’ ಅಡಗಿದೆ ಎಂದು ಪರಿಭಾವಿಸಿಕೊಂಡು ಕುಳಿತಿರುವ ಜೆಡಿಎಸ್‌ ನಾಯಕರಿಗೆ ಈ ಚುನಾವಣೆ ಕಸುವು ತುಂಬುವ ಫಲಿತಾಂಶವಾಗಿಲ್ಲ.

ಮುಂದಿನ ವರ್ಷ ಕರ್ನಾಟಕದ ವಿಧಾನಸಭೆ ಚುನಾವಣೆ ನಡೆಯಲಿಕ್ಕಿದೆ. ಮುಖ್ಯಮಂತ್ರಿ ಬದಲಾವಣೆ, ಕೋವಿಡ್ ಸಂಕಷ್ಟದ ಕಾಲದಲ್ಲಿನ ಆಡಳಿತ ನಿರ್ವಹಣೆ ವೈಫಲ್ಯ, ಪಕ್ಷದೊಳಗಿನ ನಾಯಕತ್ವ ಗೊಂದಲ, ಅಭಿವೃದ್ಧಿಯಲ್ಲಾದ ಹಿನ್ನಡೆಗಳು 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರಬಹುದೆಂಬ ವಿಶ್ವಾಸವನ್ನೇ ಬಿಜೆಪಿ ನಾಯಕರಲ್ಲಿ ಕುಗ್ಗಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌, ಪಕ್ಷದ ನಾಯಕರಿಗೆ ಚೇತೋಹಾರಿಯಾಗಿತ್ತು. ಆದರೆ, ಬಣ್ಣದ ಭರವಸೆಗಳು, ಅಭಿವೃದ್ಧಿಯ ಮಂತ್ರಗಳು ಮತದಾರರ ಕೈ ಹಿಡಿಯಲಾರವು ಎಂಬುದು ಕಮಲ ಕಟ್ಟಾಳುಗಳಿಗೆ ಗೊತ್ತಿಲ್ಲದ್ದೇನಲ್ಲ.

ADVERTISEMENT

ಅದಕ್ಕಾಗಿ, ಹಿಜಾಬ್ ವಿರೋಧದ ವಿವಾದ, ಗೋಹತ್ಯೆ ನಿಷೇಧ, ಪುಣ್ಯಕೋಟಿ ಗೋದತ್ತು ಯೋಜನೆ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ.. ಇಂತಹವುಗಳನ್ನು ಮುನ್ನೆಲೆಗೆ ತರಲಾಗಿತ್ತು.

ಪ್ರತಿಕೂಲ ರಾಜಕೀಯ ಸನ್ನಿವೇಶ ಇದ್ದರೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆದ್ದಿದೆ. ಮೂವರು ಮುಖ್ಯಮಂತ್ರಿಗಳನ್ನು ಕಂಡರೂ ಉತ್ತರಾಖಂಡದಲ್ಲಿ ಪಕ್ಷದ ವಿಜಯ ಪತಾಕೆ ಹಾರಿದೆ. ಗೋವಾದಲ್ಲಿ ಅಧಿಕಾರ ಹಿಡಿಯುವ ಸನಿಹಕ್ಕೆ ಬಂದಿದೆ. ಹಿಂದೂಗಳ ಓಲೈಕೆ, ಕೋಮು ಭಾವನೆ ಕೆರಳಿಸಿ ಮತಬ್ಯಾಂಕ್ ಭದ್ರಗೊಳಿಸುವ ತಂತ್ರ, ‘ಸಂಘ’ ಕಾರ್ಯಕರ್ತರು ಕಟ್ಟಿರುವ ಗಟ್ಟಿ ತಳಪಾಯಗಳು ಗೆಲುವಿನ ದಾರಿ ತೋರಿಸಿದ್ದು ದಿಟ.

ಹಿಂದುತ್ವದ ಕಾರ್ಯಸೂಚಿಯೇ ಗೆಲುವಿನ ರಹದಾರಿ ಎಂಬುದನ್ನು ಇದು ಶ್ರುತಪಡಿಸಿದೆ. ಬೊಮ್ಮಾಯಿ ಮಂಡಿಸಿದ ಬಜೆಟ್‌ನ ಘೋಷಣೆಗಳಲ್ಲಿಹಿಂದೂ ಮತಗಳನ್ನು ಮತ್ತಷ್ಟು ಕ್ರೋಡೀಕರಿಸುವ ಅಂಶಗಳಿವೆ. ಹಿಜಾಬ್‌ ವಿವಾದ ವಿಸ್ತರಣೆ, ಪಠ್ಯಕ್ರಮದ ಕೇಸರಿಕರಣ, ಮತೀಯ ಗೂಂಡಾಗಿರಿಗೆ ಬೆಂಬಲ.. ಹೀಗೆ ಬಿಜೆಪಿಯ ನಡೆ, ಮತಬ್ಯಾಂಕ್‌ನ್ನು ಮತ್ತಷ್ಟು ಖಾತ್ರಿ ಪಡಿಸುವ ಹೆಜ್ಜೆಗಳಾಗಿವೆ. ಕರ್ನಾಟಕಕ್ಕೆ ಬಿ.ಎಸ್. ಯಡಿಯೂರಪ್ಪ ಅವರಂತಹ ಜನಸಮೂಹವನ್ನು ಸೆಳೆದು ಮತವಾಗಿ ಪರಿವರ್ತಿಸಬಲ್ಲ ನಾಯಕ ಬೇಕಿಲ್ಲ; ಹಿಂದುತ್ವದ ‘ಮಂತ್ರ’ವೊಂದೇ ಸಾಕು ಎಂಬುದನ್ನು ಐದು ರಾಜ್ಯಗಳ ಫಲಿತಾಂಶ ತೋರಿಸಿದೆ.

ಹೀಗಾಗಿ, ಪ್ರಧಾನಿ ನರೇಂದ್ರ ಮೋದಿ ಒಲವಿರುವ ಬೊಮ್ಮಾಯಿ ನಾಯಕತ್ವ ಬದಲಾವಣೆಯ ಮಾತುಗಳು ಮತ್ತೆ ಮುನ್ನೆಲೆಗೆ ಬರಲಾರದು. ಸಂಘದ ವರ ಇರುವವರೆಗೆ ಬೊಮ್ಮಾಯಿ ನಾಯಕತ್ವಕ್ಕೆ ಅಡ್ಡಿ ಇಲ್ಲ. ಭವಿಷ್ಯದ ಚುನಾವಣೆ ದೃಷ್ಟಿಯಿಂದ ಬಿಜೆಪಿ ವರಿಷ್ಠರು ಬಯಸಿದರಷ್ಟೇ ಸಂಪುಟ ಪುನರ್‌ರಚನೆ ನಡೆಯಲಿದೆ. ಈ ಫಲಿತಾಂಶವು ಬೊಮ್ಮಾಯಿ ಅವರ ಬಲ ಹೆಚ್ಚಿಸಿದೆ.

ಕಾಂಗ್ರೆಸ್‌ಗೆ ಪಾಠ

ಬಿಜೆಪಿಯ ಕಾರ್ಯಸೂಚಿ, ಎಸ್‌ಡಿಪಿಐಯ ನಿಗೂಢ ನಡೆಯನ್ನು ಅಂದಾಜಿಸಲಾಗದೇ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು, ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂದು ಗೊಂದಲದಲ್ಲಿ ಸಿಲುಕಿರುವ ಕಾಂಗ್ರೆಸ್ ನಾಯಕರಿಗೆ ಈಫಲಿತಾಂಶ ದೊಡ್ಡ ಪಾಠವಾಗಿದೆ. ಚುನಾವಣೆ ಹೊತ್ತಿಗೆ ಏನೆಲ್ಲಾ ಕಸರತ್ತು ಮಾಡಿದರೂ ಪಂಜಾಬಿನಲ್ಲಿ ಕಾಂಗ್ರೆಸ್ ಮಲಗಿಯೇ ಬಿಟ್ಟಿದೆ. ಅಲ್ಲಿನ ನಾಯಕರಒಳಜಗಳ ಹಾಗೂ ಬಹಿರಂಗ ಕುಟುಕು ಮಾತುಗಳು ಪಕ್ಷವನ್ನು ನೆಲಕಚ್ಚಿಸಿದವು. ಉತ್ತರಾಖಂಡ, ಗೋವಾದಲ್ಲಿ ಅವಕಾಶ ಇದ್ದರೂ ಅದನ್ನು ಅನುಕೂಲಕಾರಿಯಾಗಿಸುವಲ್ಲಿ ಯಶ ಕಾಣಲಿಲ್ಲ.

ಉತ್ತರ ಪ್ರದೇಶದಲ್ಲಂತೂ ಹೀನಾಯ ಸೋಲೇ ಕಂಡಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಉಮೇದಿನಲ್ಲಿರುವ ಕಾಂಗ್ರೆಸ್‌ ನಾಯಕರು ಒಳಜಗಳ, ಪರಸ್ಪರ ಕಾಲೆಳೆಯುವ ರಾಜಕಾರಣವನ್ನೇ ಬಿಟ್ಟಿಲ್ಲ. ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡು, ಒಮ್ಮುಖ ನಿಲುವಿನಿಂದ ನಡೆಯದಿದ್ದರೆ ಅನುಕೂಲಕಾರಿ ಪರಿಸ್ಥಿತಿ ಅನಾಹುತಕಾರಿಯಾಗುವ ಸಂದೇಶವನ್ನೂ ಈ ಫಲಿತಾಂಶ ತೋರಿಸಿದೆ.

‘ಅಡ್ಡದಾರಿ’ ಹಿಡಿದು ಗೆಲ್ಲಬಹುದಾದ ಅವಕಾಶವೂ ಕಾಂಗ್ರೆಸ್‌ಗೆ ಇಲ್ಲ. ಹೀಗಾಗಿ, ಚುನಾವಣೆಯತ್ತ ಮುಖ ಮಾಡಿರುವ ನಾಡಿನಲ್ಲಿ ಕಾಂಗ್ರೆಸ್‌ ನಾಯಕರಿಗೆ ಹಲವು ಸವಾಲುಗಳನ್ನು ಈ ಫಲಿತಾಂಶ ಮುಂದೊಡ್ಡಿದೆ.

----

ಅವಧಿಪೂರ್ವ ಚುನಾವಣೆ ಸಾಧ್ಯತೆ ಕ್ಷೀಣ

ಕರ್ನಾಟಕದಲ್ಲಿ ಅವಧಿ ಪೂರ್ಣ ಚುನಾವಣೆ ನಡೆಯಲಿದೆ ಎಂಬ ವದಂತಿಗಳಿಗೂ ಈ ಫಲಿತಾಂಶ ತಡೆಹಾಕಲಿದೆ.

ಗುಜರಾತ್‌ನಲ್ಲಿ ಡಿಸೆಂಬರ್‌ನೊಳಗೆ ಚುನಾವಣೆ ನಡೆಯಲಿದ್ದು, ಅದೇ ವೇಳೆ ಕರ್ನಾಟಕದಲ್ಲೂ ಚುನಾವಣೆಗೆ ಹೋಗಬಹುದು ಎಂಬ ಚರ್ಚೆ ಶಾಸಕರ ವಲಯದಲ್ಲಿ ನಡೆಯುತ್ತಿದೆ.

ಕಾಂಗ್ರೆಸ್‌ಗಿಂತ ಪ್ರಬಲ ಪೈಪೋಟಿ ನೀಡುತ್ತಿರುವ ಎಎಪಿಯ ಹೆಡೆಮುರಿ ಕಟ್ಟುವುದು ಬಿಜೆಪಿಯ ಮುಂದಿರುವ ಸವಾಲು. ಪಂಜಾಬ್‌ನ ಅಸಾಮಾನ್ಯ ಗೆಲುವಿನ ಉಮೇದಿನಲ್ಲಿರುವ ಎಎಪಿಯ ಮುಂದಿನ ಗುರಿ ಸಹಜವಾಗಿ ಗುಜರಾತ್ ಆಗಿರುತ್ತದೆ. ಮೋದಿ–ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್‌ನ ಅಧಿಕಾರವನ್ನು ಉಳಿಸಿಕೊಳ್ಳುವುದು ಹಾಗೂ ಕರ್ನಾಟಕದಲ್ಲಿ ಮತ್ತೆ ಅಧಿಕಾರ ಹಿಡಿಯುವುದು ಸವಾಲಿನ ಕೆಲಸ.

ಎರಡು ರಾಜ್ಯಗಳ ಮೇಲೆ ಏಕಕಾಲದಲ್ಲಿ ಗಮನ ಕೇಂದ್ರೀಕರಿಸಿದರೆ ಗೆಲುವು ಸಲೀಸಲ್ಲ. ಅಷ್ಟಕ್ಕೂ ಬೊಮ್ಮಾಯಿ ಅಧಿಕಾರ ಹಿಡಿದು ಏಳು ತಿಂಗಳಾಗಿದೆ. ಶಾಸಕರೂ ಕೂಡ ತಯಾರಿಲ್ಲ. ಹೀಗಾಗಿ, ಅವಧಿ ಪೂರ್ವ ಚುನಾವಣೆ ನಡೆಯುವುದು ಅನುಮಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.