ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ 50 ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ನಾಯಕರು ಮಂಗಳವಾರ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.
ಜಂಟಿ ರಾಜೀನಾಮೆ ಪತ್ರವನ್ನು ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಿದರು.
ಚಂದ್ ಮತ್ತು ಮಾಜಿ ಸಚಿವರಾದ ಅಬ್ದುಲ್ ಮಜಿದ್ ವಾನಿ, ಮನೋಹರ್ ಲಾಲ್ ಶರ್ಮಾ, ಘರು ರಾಮ್ ಮತ್ತು ಮಾಜಿ ಶಾಸಕ ಬಲ್ವಾನ್ ಸಿಂಗ್ ಸೇರಿದಂತೆ ಹಲವರು ಪಕ್ಷದ ತಮ್ಮ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದರು.
‘ಆಜಾದ್ ಅವರನ್ನು ಬೆಂಬಲಿಸಿ ನಾವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜಂಟಿ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದೇವೆ’ ಎಂದು ಬಲ್ವಾನ್ ಸಿಂಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ, 73ರ ಹರೆಯದ ಆಜಾದ್ ಅವರು ಶುಕ್ರವಾರ ಕಾಂಗ್ರೆಸ್ ಜೊತೆಗಿನ ಐದು ದಶಕಗಳ ಒಡನಾಟವನ್ನು ಅಂತ್ಯಗೊಳಿಸಿದ್ದರು. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಅವರು, ‘ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಇದಕ್ಕೆ ರಾಹುಲ್ ಗಾಂಧಿ ಅವರೇ ನೇರ ಕಾರಣ’ ಎಂದು ವಾಗ್ದಾಳಿ ನಡೆಸಿದ್ದರು.
ಕಾಂಗ್ರೆಸ್ ತೊರೆದಿರುವ ಆಜಾದ್ ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡಲಿದ್ದಾರೆ.
ಮಾಜಿ ಸಚಿವರು ಮತ್ತು ಶಾಸಕರು ಸೇರಿದಂತೆ ಹನ್ನೆರಡು ಪ್ರಮುಖ ಕಾಂಗ್ರೆಸ್ ನಾಯಕರು, ಪಂಚಾಯತ್ ರಾಜ್ ಸಂಸ್ಥೆ (ಪಿಆರ್‌ಐ)ಯ ನೂರಾರು ಸದಸ್ಯರು, ಪುರಸಭೆ ಕಾರ್ಪೊರೇಟರ್‌ಗಳು ಮತ್ತು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರು ಈಗಾಗಲೇ ಆಜಾದ್‌ಗೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.