ನವದೆಹಲಿ: ಹಾವು ಕಡಿತದಿಂದ ದೇಶದಲ್ಲಿ ಪ್ರತಿ ವರ್ಷ ಸುಮಾರು 50,000 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಸೋಮವಾರ ಲೋಕಸಭೆಯಲ್ಲಿ ತಿಳಿಸಿದ್ದಾರೆ.
ಮಹತ್ವದ ವಿಷಯಗಳ ಚರ್ಚೆಯ ಸಂದರ್ಭದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಭಾರತದಾದ್ಯಂತ ಪ್ರತಿ ವರ್ಷ, 30 ರಿಂದ 40 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದಾರೆ. ಅವರಲ್ಲಿ ಸುಮಾರು 50 ಸಾವಿರ ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ.
ಹವಾಮಾನ ವೈಪರೀತ್ಯವು ಹಾವು ಕಡಿತ ಪ್ರಕರಣಗಳು ಅಧಿಕಗೊಳ್ಳಲು ಕಾರಣವಾಗಿದೆ. 28 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನವಿದ್ದಲ್ಲಿ ಇಂಥ ಪ್ರಕರಣಗಳು ಹೆಚ್ಚಾಗುತ್ತವೆ’ ಎಂದು ಅವರು ತಿಳಿಸಿದ್ದಾರೆ.
ಇನ್ನು ಬಿಹಾರದಲ್ಲಿ ಬಡತನ ಪ್ರಮಾಣ ಹೆಚ್ಚಿದ್ದು, ಈ ರಾಜ್ಯ ಹೆಚ್ಚಿನ ನೈಸರ್ಗಿಕ ವಿಕೋಪಕ್ಕೂ ತುತ್ತಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಬೀಡಿ ಕಾರ್ಮಿಕರ ವೇತನ ಹೆಚ್ಚಿಸಿ. ಜೊತೆಗೆ, 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಪಿಂಚಣಿ ನೀಡಬೇಕು. ಇದಕ್ಕಾಗಿ ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು’ ಎಂದು ವೇಲೂರಿನ ಸಂಸದ ಎಂ. ಕಾಥಿರ್ ಆನಂದ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
‘ಆಯುಷ್ಮಾನ್ ಭಾರತ’ ಕಾರ್ಡ್‌ಗಳ ಮೂಲಕ ಭರಿಸಲಾಗುವ ಹಣವು ಎಲ್ಲ ವೈದ್ಯಕೀಯ ವೆಚ್ಚಕ್ಕೂ ಅನ್ವಯಿಸಲಿ’ ಎಂದು ಕನ್ಯಾಕುಮಾರಿ ಕ್ಷೇತ್ರದ ಸಂಸದ ವಿಜಯ್ ವಸಂತ್ ಸರ್ಕಾರವನ್ನು ಆಗ್ರಹಿಸಿದರು
‘ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಅಡಿ ನೀಡಲಾಗುವ ಪೌಷ್ಠಿಕ ಆಹಾರಕ್ಕೆ ಸಂಬಂಧಿಸಿ ಪಂಜಾಬ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಸುಳ್ಳು ಫಲಾನುಭವಿಗಳನ್ನು ಸೃಷ್ಟಿಸಲಾಗುತ್ತಿದೆ. ಈ ಕುರಿತು ಸಿಬಿಐ ತನಿಖೆ ನಡೆಸಬೇಕು. ಜೊತೆಗೆ 28 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ತಿಂಗಳಿಗೆ ಕೇವಲ ₹2,200 ವೇತನ ನೀಡಲಾಗುತ್ತಿದೆ. ಇದರಿಂದ ತಾಯಿಯರಿಗೆ, ಮಕ್ಕಳಿಗೆ ಅನ್ಯಾಯವಾಗುತ್ತಿದೆ’ ಎಂದು ಭಟಿಂಡಾ ಕ್ಷೇತ್ರದ ಸಂಸದೆ ಹರ್ಸಿಂರತ್ ಕೌರ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಒತ್ತಾಯಿಸಿದರು
‘ಜಾರ್ಖಂಡ್‌ನಲ್ಲಿ ಆದಿವಾಸಿಗಳ ಹಕ್ಕುಗಳನ್ನು ಬಾಂಗ್ಲಾದೇಶದಿಂದ ಬಂದ ವಲಸಿಗರು ಕಸಿದುಕೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸಿ ಆದಿವಾಸಿಗಳು ಪ್ರತಿಭಟಿಸಿದರೆ, ಸರ್ಕಾರವು ಅವರ ಮೇಲೆ ಲಾಠಿ ಬೀಸುತ್ತಿದೆ. ಇಲ್ಲಿನ ಸರ್ಕಾರವು ಬಾಂಗ್ಲಾದೇಶದ ಪೊಲೀಸರನ್ನು ನಿಯೋಜಿಸುತ್ತಿದೆ. ಆದ್ದರಿಂದ, ರಾಜ್ಯದ ಮೇಲೆ ರಾಷ್ಟ್ರಪತಿ ಆಳ್ವಿಕೆ ಹೇರಬೇಕು’ ಎಂದು ಗೊಡ್ಡ ಕ್ಷೇತ್ರದ ಸಂಸದ ನಿಶಿಕಾಂತ್ ದೂಬೆ ಆಗ್ರಹಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.