ADVERTISEMENT

ಪಿ.ಎಂ.ಕೇರ್ಸ್‌: ಶೇ 51ರಷ್ಟು ಅರ್ಜಿ ತಿರಸ್ಕೃತ

ಕೋವಿಡ್‌ನಿಂದ ಅನಾಥರಾದ ಮಕ್ಕಳಿಗೆ ಸಾಮಾಜಿಕ ಭದ್ರತೆ ನೀಡುವ ಯೋಜನೆ

ಪಿಟಿಐ
Published 16 ಜುಲೈ 2024, 15:31 IST
Last Updated 16 ಜುಲೈ 2024, 15:31 IST
   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಅವಧಿಯಲ್ಲಿ ಅನಾಥರಾಗಿದ್ದ ಮಕ್ಕಳ ಕ್ಷೇಮಾಭಿವೃದ್ಧಿ ಯೋಜನೆಯಡಿ ನೆರವು ಕೋರಿ ‘ಪಿ.ಎಂ.ಕೇರ್ಸ್‌’ ನಿಧಿಗೆ ಸಲ್ಲಿಕೆಯಾಗಿದ್ದ ಶೇ 51 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ ಪ್ರಕರಣಗಳು ಗರಿಷ್ಠ ಮಟ್ಟವನ್ನು ತಲುಪಿದ್ದ ಅವಧಿಯಲ್ಲಿ ತಂದೆ–ತಾಯಿ ಕಳೆದುಕೊಂಡಿದ್ದ ಮಕ್ಕಳಿಗೆ ನೆರವಾಗಲು ಮೇ 29, 2021ರಂದು ‘ಪಿ.ಎಂ ಕೇರ್ಸ್ ಫಾರ್ ಚಿಲ್ಡ್ರನ್ಸ್’ ಯೋಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು.

ಇದರ ಪ್ರಕಾರ, ಮಾರ್ಚ್‌ 11, 2020 ಮತ್ತು ಮೇ 5, 2023 ನಡುವಿನ ಅವಧಿಯಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ತಂದೆ–ತಾಯಿ, ಪೋಷಕರು ಅಥವಾ ಸಾಕು ತಂದೆ–ತಾಯಿ ಕಳೆದುಕೊಂಡ ಮಕ್ಕಳಿಗೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿತ್ತು. 

ADVERTISEMENT

ಅಧಿಕೃತ ಅಂಕಿ ಅಂಶಗಳ ಪ್ರಕಾರ, 33 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 613 ಜಿಲ್ಲೆಗಳಿಂದ ಒಟ್ಟು 9,331 ಅರ್ಜಿಗಳು ಯೋಜನೆಯಡಿ ನೆರವು ಕೋರಿ ಸಲ್ಲಿಕೆಯಾಗಿದ್ದವು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಅಧಿಕಾರಿಯೊಬ್ಬರು ಪಿಟಿಐ ಜೊತೆಗೆ ಹಂಚಿಕೊಂಡಿರುವ ಅಂಕಿಅಂಶಗಳ ಪ್ರಕಾರ, ‘ಇವುಗಳಲ್ಲಿ 4,781 ಅರ್ಜಿಗಳು ತಿರಸ್ಕೃತಗೊಂಡಿವೆ ಮತ್ತು 18 ಅರ್ಜಿಗಳು ಇನ್ನೂ ಅನುಮೋದನೆ ಹಂತದಲ್ಲಿವೆ’.

ಈ ಅರ್ಜಿಗಳು ತಿರಸ್ಕೃತಗೊಳ್ಳಲು ನಿಖರ ಕಾರಣ ಉಲ್ಲೇಖಿಸಿಲ್ಲ. 32 ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ 558 ಜಿಲ್ಲೆಗಳ 4,532 ಅರ್ಜಿಗಳಷ್ಟೇ ಸ್ವೀಕೃತವಾಗಿವೆ ಎಂದು ದೃಢಪಡಿಸಿವೆ.

ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಿಂದ ಗರಿಷ್ಠ ಸಂಖ್ಯೆಯಲ್ಲಿ ಅಂದರೆ ಕ್ರಮವಾಗಿ 1,553, 1511 ಮತ್ತು 1,007 ಅರ್ಜಿಗಳು ಬಂದಿದ್ದವು. ಇವುಗಳ ಪೈಕಿ ಕ್ರಮವಾಗಿ 855, 210 ಮತ್ತು 467 ಅರ್ಜಿಗಳಷ್ಟೇ ಪುರಸ್ಕೃತಗೊಂಡಿವೆ.

ತಂದೆ–ತಾಯಿ, ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ರಕ್ಷಣೆ ಒದಗಿಸುವದು, ಆರೋಗ್ಯ ವಿಮೆ ಒದಗಿಸುವುದು, ಶೈಕ್ಷಣಿಕವಾಗಿ ಸಬಲೀಕರಣಗೊಳಿಸುವುದು, ಇಂತಹ ಮಕ್ಕಳು 23 ವರ್ಷ ವಯಸ್ಸಿನವರಿಗೆ ಆರ್ಥಿಕ ನೆರವು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.