ತಿರುವನಂತಪುರ: ಕೊಚ್ಚಿ ದೇವಸ್ವಂ ಮಂಡಳಿ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ 54 ಮಂದಿ ಬ್ರಾಹ್ಮಣೇತರರನ್ನು ಅರ್ಚಕರ ಸ್ಥಾನಕ್ಕೆ ನೇಮಕ ಮಾಡಲಾಗುತ್ತಿದೆ.
ದೇವಸ್ವಂ ನೇಮಕಾತಿ ಮಂಡಳಿ ಓಎಂಆರ್– ಪರೀಕ್ಷೆ ಮತ್ತು ಸಂದರ್ಶನ ಪ್ರಕ್ರಿಯೆ ಮೂಲಕರ್‍ಯಾಂಕ್ ಪಟ್ಟಿ ಸಿದ್ಧಪಡಿಸಿ ಪರಿಶಿಷ್ಟ ಜಾತಿ ಸಮುದಾಯದ ಏಳು ಮಂದಿ ಸೇರಿದಂತೆ ಒಟ್ಟು 54 ಮಂದಿ ಬ್ರಾಹ್ಮಣೇತರರನ್ನು ಅರ್ಚಕರ ಸ್ಥಾನಕ್ಕೆ ಆಯ್ಕೆ ಮಾಡಿದೆ. ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿಲ್ಲದಂತೆ ಈ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ದೇವಸ್ವಂ ಸಚಿವ ಕಡಕಂಪಲಿ ಸುರೇಂದ್ರನ್ ಹೇಳಿದ್ದಾರೆ.
ಜೇಷ್ಠತೆ ಮತ್ತು ಮೀಸಲಾತಿ ಅನ್ವಯ ನೇಮಕಾತಿ ಪ್ರಕ್ರಿಯೆಗೆ ಪಟ್ಟಿ ಸಿದ್ಧಪಡಿಸಲಾಗಿತ್ತು ಹಾಗೂ ಮಂಡಳಿಯು 70 ಅಭ್ಯರ್ಥಿಗಳನ್ನು ಶಾಂತಿ ಹುದ್ದೆಗಳಿಗೆ ಶಿಫಾರಸು ಮಾಡಿದೆ. ನೇಮಕಾತಿ ಪಟ್ಟಿಯಲ್ಲಿರುವ 54 ಮಂದಿ ಬ್ರಾಹ್ಮಣೇತರ ಅಭ್ಯರ್ಥಿಗಳ ಪೈಕಿ 31 ಅಭ್ಯರ್ಥಿಗಳ ಹೆಸರು ಜೇಷ್ಠತಾ ಪಟ್ಟಿಯಲ್ಲಿದೆ. ಮುಂದುವರಿದ ಸಮುದಾಯಗಳಿಗೆ ಸೇರಿದ 16 ಅಭ್ಯರ್ಥಿಗಳ ಹೆಸರು ಶಾಂತಿ ಹುದ್ದೆಯ ಜೇಷ್ಠತಾ ಪಟ್ಟಿಯಲ್ಲಿದೆ ಎಂದು ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ಹಾಗೂತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎಂ.ರಾಜಗೋಪಾಲನ್ ನಾಯರ್ ತಿಳಿಸಿದ್ದಾರೆ.
ಪಟ್ಟಿಯಲ್ಲಿರುವ ಬಿಲ್ಲವ ಸಮುದಾಯದ 41 ಅಭ್ಯರ್ಥಿಗಳ ಪೈಕಿ 29 ಜನರ ಹೆಸರು ಜೇಷ್ಠತೆ ಆಧಾರದಲ್ಲಿ ಅರ್ಹತೆ ಪಡೆದಿದ್ದಾರೆ. ದೀವರ ಸಮುದಾಯದ 4 ಅಭ್ಯರ್ಥಿಗಳ ಪೈಕಿ ಇಬ್ಬರು ಜೇಷ್ಠತೆ ಆಧಾರದಲ್ಲಿಯೇ ಆಯ್ಕೆಯಾಗಿದ್ದಾರೆ. ಹಿಂದೂ ನಾಡರ್ ಮತ್ತು ವಿಶ್ವಕರ್ಮ ಸಮುದಾಯಗಳ ತಲಾ ಒಬ್ಬ ಅಭ್ಯರ್ಥಿ ಶಾಂತಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ತಂತ್ರಿ ಮಂಡಳಿ ಮತ್ತು ತಂತ್ರಿ ಸಮಾಜದ ಪ್ರಮುಖ ತಂತ್ರಿಗಳು ನೇಮಕಾತಿ ಮಂಡಳಿಯ ಸಂದರ್ಶನ ಪ್ರಕ್ರಿಯೆ ನಡೆಸಿದ್ದಾರೆ. ಈ ಹಿಂದೆ ಆರು ಮಂದಿ ದಲಿತರು ಸೇರಿ ಒಟ್ಟು 36 ಬ್ರಾಹ್ಮಣೇತರರು ಟಿಡಿಬಿ ಅಡಿಯಲ್ಲಿ ದೇವಾಲಯದ ಅರ್ಚಕರ ಸ್ಥಾನಕ್ಕೆ ನೇಮಕಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.