ಪಟ್ನಾ: ಶೇಖ್‌ಪುರ ಜಿಲ್ಲೆಯ ಫಾರ್‌ಪುರ ಗ್ರಾಮಕ್ಕೆ ‘ವಿಕಾಸ ಸಮೀಕ್ಷಾ ಯಾತ್ರೆ’ಯ ಸಂದರ್ಭದಲ್ಲಿ ಶುಕ್ರವಾರ ಭೇಟಿ ನೀಡಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಅಲ್ಲಿ ದಿಬ್ಬವೊಂದನ್ನು ಗುರುತಿಸಿದ್ದರು. ಅದರಲ್ಲಿ ಉತ್ಖನನ ನಡೆಸಿದ ಪರಿಣಾಮ ಪುರಾತನ ಕಾಲದ ಮಡಿಕೆಯ ಚೂರುಗಳು ದೊರೆತಿವೆ.
ದಿಬ್ಬ ಗಮನಿಸಿದ್ದ ನಿತೀಶ್, ಪ್ರಾಚೀನ ಮತ್ತು ಐತಿಹಾಸಿಕ ಮಹತ್ವದ ಸ್ಥಳದಂತೆ ಕಾಣುತ್ತಿದೆ ಎಂದಿದ್ದರು.
ಈ ಮಡಿಕೆಯ ಚೂರುಗಳು ಕ್ರಿಸ್ತ ಪೂರ್ವ 1000ಕ್ಕೂ ಮೊದಲಿನವು ಎಂದು ಪ್ರಾಚ್ಯವಸ್ತು ಸಂಶೋಧಕರು ತಿಳಿಸಿದ್ದಾರೆ. ಮಡಿಕೆ ಅಥವಾ ಮಣ್ಣಿನಿಂದ ಮಾಡಿದ ಇತರ ವಸ್ತುಗಳ ಚೂರುಗಳೂ ದೊರೆತಿವೆ.
‘ಈ ಸ್ಥಳಕ್ಕೆ ಶನಿವಾರ ಭೇಟಿ ನೀಡಿದೆವು. ದಿಬ್ಬದಲ್ಲಿ ಮಡಿಕೆಯ ಹಲವು ಚೂರುಗಳನ್ನು ಪತ್ತೆ ಹಚ್ಚುವುದು ರೋಮಾಂಚನ ಉಂಟು ಮಾಡಿತು. ಇದರಿಂದಲೇ ಈ ದಿಬ್ಬದ ಪ್ರಾಚೀನತೆ ತಿಳಿಯುತ್ತದೆ’ ಎಂದು ಕೆ.ಪಿ. ಜೈಸ್ವಾಲ್ ಸಂಶೋಧನಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಬಿಜಯ್ ಕುಮಾರ್ ತಿಳಿಸಿದ್ದಾರೆ.
‘ಕಪ್ಪು ಮತ್ತು ಕೆಂಪು ಬಣ್ಣದ ಚೂರುಗಳು ಸ್ಥಳದಲ್ಲಿ ದೊರೆತಿದ್ದು, ಕ್ರಿ.ಪೂ 1000ದ ಅವಧಿಯದ್ದಿರಬಹುದು. ಕೆಂಪು ಬಣ್ಣದ ಮರದ ವಸ್ತುಗಳು ದೊರೆತಿದ್ದು, ಅವು ನವಶಿಲಾಯುಗದ್ದಿರಬಹುದು’ ಎಂದು ಚೌಧರಿ ತಿಳಿಸಿದ್ದಾರೆ. ಸ್ಥಳದಲ್ಲಿ ಬುದ್ಧ, ವಿಷ್ಣು ಮತ್ತು ಕೆಲ ದೇವತೆಗಳ ಚೂರಾದ ಪ್ರತಿಮೆಗಳೂ ದೊರೆತಿವೆ.
ರಾಜ್ಯ ಮುಖ್ಯ ಕಾರ್ಯದರ್ಶಿ ಅಂಜನಿ ಕುಮಾರ್ ಸಿಂಗ್ ಅವರ ನಿರ್ದೇಶನದಂತೆ ಪ್ರಾಚ್ಯವಸ್ತು ಸಂಶೋಧಕರು ಫಾರ್‌ಪರ್ ಗ್ರಾಮಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.