ಮುಂಬೈ: ಪುಣೆ ಜಿಲ್ಲೆಯ ಭೀಮಾ–ಕೋರೆಗಾಂವ್ ಯುದ್ಧದ 200ನೇ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಹಿಂಸಾಚಾರಕ್ಕೆ ಮಹಾರಾಷ್ಟ್ರದಾದ್ಯಂತ ಆಕ್ರೋಶ ಭುಗಿಲೆದ್ದಿದೆ. ವಿವಿಧೆಡೆ ದಲಿತ ಸಂಘಟನೆಗಳು ಮಂಗಳವಾರ ನಡೆಸಿದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿವೆ.
ಮುಂಬೈ, ಠಾಣೆ, ಔರಂಗಾಬಾದ್ ಸೇರಿದಂತೆ ಹಲವು ನಗರಗಳಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆದಿದ್ದು, ರೈಲು ಮತ್ತು ರಸ್ತೆ ತಡೆ ನಡೆಸಲಾಗಿದೆ. ಭೀಮಾ–ಕೋರೆಗಾಂವ್‌ದಲ್ಲಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಔರಂಗಾಬಾದ್‌ನಲ್ಲಿ ಹಿಂಸಾಚಾರಕ್ಕಿಳಿದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಶೆಲ್ ಸಿಡಿಸಿದರು. ಭೀಮಾ– ಕೋರೆಗಾಂವ್ ಯುದ್ಧದಲ್ಲಿ ದಲಿತರನ್ನು ಒಳಗೊಂಡ ಬ್ರಿಟಿಷ್ ಸೇನೆಯು ಮೇಲ್ಜಾತಿಯವ
ರನ್ನು ಒಳಗೊಂಡ ಪೇಶ್ವೆ ಸೇನೆಯನ್ನು ಸೋಲಿಸಿದ ಸ್ಮರಣಾರ್ಥ ಸೋಮವಾರ ಆಯೋಜಿಸಿದ್ದ 200ನೇ ವಿಜಯೋತ್ಸವದ ವೇಳೆ ಕೇಸರಿ ಧ್ವಜ ಹಿಡಿದಿದ್ದ ಯುವಕರು ದಲಿತ ಸಮುದಾಯದವರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹಲವು ವಾಹನಗಳಿಗೆ ಬೆಂಕಿ ಹಚ್ಚಿ ಜಖಂಗೊಳಿಸಲಾಗಿತ್ತು. ಈ ಹಿಂಸಾಚಾರದಲ್ಲಿ ಮರಾಠ ಸಮುದಾಯದ ಯುವಕನೊಬ್ಬ ಸಾವನ್ನಪ್ಪಿದ್ದ ಮತ್ತು ಹಲವರು ಗಾಯಗೊಂಡಿದ್ದರು.
ಈ ಹಿಂಸಾಚಾರ ಖಂಡಿಸಿ ಮಂಗಳವಾರ ಮುಂಬೈ ನಗರದ ಹಲವೆಡೆ ದಲಿತ ಸಂಘಟನೆಗಳು ಮತ್ತು ಭಾರತೀಯ ರಿಪಬ್ಲಿಕ್ ಪಕ್ಷದ (ಆರ್‌ಪಿಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚೆಂಬೂರಿನಲ್ಲಿ ಪ್ರತಿಭಟನಾಕಾರರು ಉಪನಗರ ರೈಲು ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಚೆಂಬೂರು, ವಿಖ್ರೋಲಿ, ಮನ್‌ಖುರ್ದ್ ಮತ್ತು ಗೋವಂದಿ ಪ್ರದೇಶದ ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರದೇಶದ ಎಲ್ಲ ಅಂಗಡಿಗಳನ್ನುಮುಚ್ಚಲಾಗಿತ್ತು. ರಾಷ್ಟ್ರೀಯ ಸುದ್ದಿ ವಾಹಿನಿಯ ಪತ್ರಕರ್ತರೊಬ್ಬರ ಮೇಲೆ ಈ ಸಂದರ್ಭದಲ್ಲಿ ಹಲ್ಲೆ ನಡೆದಿದ್ದು, ಅಪಾಯದಿಂದ ಪಾರಾಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೇಂದ್ರೀಯ ರೈಲ್ವೆ ಕುರ್ಲಾ ಮತ್ತು ವಾಶಿ ನಡುವಣ ಉಪನಗರ ರೈಲು ಸೇವೆಯನ್ನು ಸ್ಥಗಿತ
ಗೊಳಿಸಿತು. ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ಬೆಳಿಗ್ಗೆ ಸೇರಿದ ನೂರಾರು ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
ಇದರಿಂದ ಮಧ್ಯಾಹ್ನದವರೆಗೂ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರಮಾಬಾಯಿ ಅಂಬೇಡ್ಕರ್ ನಗರದಲ್ಲಿ ಪ್ರತಿಭಟನಾಕಾರರು ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ, ಬಸ್ ಗಾಜುಗಳು ಒಡೆದಿವೆ. ಪ್ರತಿಭಟನೆ ನಡೆಸುತ್ತಿದ್ದ 100ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೂರ್ವ ಉಪನಗರದಲ್ಲಿ ಕಟ್ಟೆಚ್ಚರವಹಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಭೀಮಾ–ಕೋರೆಗಾಂವ್‌ನಲ್ಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಠಾಣೆಯಲ್ಲೂ ದಲಿತ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆರ್‌ಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ದಲಿತರು ಮತ್ತು ಮರಾಠ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಬಸ್‌ಗಳ ಮೇಲೆಯೂ ಕಲ್ಲು ತೂರಾಟ ನಡೆದಿದೆ.
ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಖುದ್ದಾಗಿ ಪರಿಶೀಲನೆ ನಡೆಸಿದರು.
ಪ್ರತಿ ವರ್ಷ ಜನವರಿ 1ರಂದು ನಡೆಯುವ ವಿಜಯೋತ್ಸವದಲ್ಲಿ 15ರಿಂದ 20 ಸಾವಿರ ಮಂದಿ ಪಾಲ್ಗೊಳ್ಳುತ್ತಾರೆ. ಈ ವರ್ಷ 200ನೇ ವಾರ್ಷಿಕೋತ್ಸವದ ಅಂಗವಾಗಿ 3.5 ಲಕ್ಷ ಜನರು ಭೇಟಿ ನೀಡಿದ್ದರು ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
ನ್ಯಾಯಾಂಗ ತನಿಖೆಗೆ ಆದೇಶ
ಭೀಮಾ–ಕೋರೆಗಾಂವ್‌ದಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ನ್ಯಾಯಾಂಗ ತನಿಖೆಗೆ ಆದೇಶ ನೀಡಿದೆ.
‘ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ಈ ಘಟನೆ ಕುರಿತು ತನಿಖೆ ನಡೆಸಲಿದ್ದಾರೆ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.
‘ಹಿಂಸಾಚಾರದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು. ಯುವಕನ ಸಾವಿನ ಪ್ರಕರಣದ ಬಗ್ಗೆ ಸಿಐಡಿ ತನಿಖೆಯೂ ನಡೆಯಲಿದೆ’ ಎಂದು ಅವರು ತಿಳಿಸಿದ್ದಾರೆ.
‘ಮಹಾರಾಷ್ಟ್ರದ ಜನತೆ ಶಾಂತಿ ಕಾಪಾಡಬೇಕು. ಮಹಾರಾಷ್ಟ್ರ ಪ್ರಗತಿಪರ ರಾಜ್ಯವಾಗಿದ್ದು, ಜಾತಿ ಆಧಾರಿತ ಹಿಂಸಾಚಾರವನ್ನು ಸಹಿಸುವುದಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳನ್ನು ನಂಬಬಾರದು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಹಬ್ಬಿಸಲಾಗುವ ಮಾಹಿತಿಗಳ ಬಗ್ಗೆಯೂ ಎಚ್ಚರವಹಿಸಬೇಕು’ ಎಂದು ಫಡಣವೀಸ್ ಕೋರಿದ್ದಾರೆ.
ಪ್ರಕಾಶ್
ಇಂದು ಮಹಾರಾಷ್ಟ್ರ ಬಂದ್‌ಗೆ ಕರೆ
ಭೀಮಾ–ಕೋರೆಗಾಂವ್ ಗ್ರಾಮದಲ್ಲಿನ ಹಿಂಸಾಚಾರ ತಡೆಯಲು ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರಿಪಾ ಬಹುಜನ ಮಹಾಸಂಘದ (ಬಿಬಿಎಂ) ಮುಖಂಡ ಪ್ರಕಾಶ್ ಅಂಬೇಡ್ಕರ್ ಅವರು ಬುಧವಾರ ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿದ್ದಾರೆ.
’ಬುಧವಾರದ ಬಂದ್‌ಗೆ ಮಹಾರಾಷ್ಟ್ರ ಪ್ರಜಾಸತ್ತಾತ್ಮಕ ಒಕ್ಕೂಟ, ಎಡಪಂಥೀಯ ಸಂಘಟನೆಗಳು ಸೇರಿದಂತೆ 250ಕ್ಕೂ ಹೆಚ್ಚು ಸಂಘ–ಸಂಸ್ಥೆಗಳು ಬೆಂಬಲ ವ್ಯಕ್ತಪಡಿಸಿವೆ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದ್ದಾರೆ.
‘ಭೀಮಾ–ಕೋರೆಗಾಂವದಲ್ಲಿ ಮರಾಠ ಸಮುದಾಯ ಮತ್ತು ದಲಿತರ ನಡುವೆ ಸಂಘರ್ಷ ನಡೆದಿಲ್ಲ. ಅಲ್ಲಿ ಉದ್ವಿಗ್ನ ಪರಿಸ್ಥಿತಿ ಇದ್ದಿದ್ದರೆ ವಿಜಯೋತ್ಸವವೇ ನಡೆಯುತ್ತಿರಲಿಲ್ಲ. ಸೋಮವಾರದ ಕಾರ್ಯಕ್ರಮವನ್ನು ಮರಾಠ ಸಂಘಟನೆಯಾದ ಸಂಭಾಜಿ ಬ್ರಿಗೇಡ್ ಆಯೋಜಿಸಿತ್ತು. ಆದರೆ, ಮಿಲಿಂದ್ ಏಕಬೋಟೆ ನೇತೃತ್ವದ ಹಿಂದೂ ಏಕ್ತಾ ಅಘಡಿ ಮತ್ತು ಸಂಭಾಜಿ ಭಿಡೆ ನೇತೃತ್ವದ ಶಿವಾಜಿ ಪ್ರತಿಷ್ಠಾನದಿಂದಾಗಿ ಹಿಂಸಾಚಾರ ಸಂಭವಿಸಿತು’ ಎಂದು ಅವರು ಆರೋಪಿಸಿದ್ದಾರೆ.
‘ಕೋರೆಗಾಂವ್ ಯುದ್ಧ ಸ್ಮಾರಕದತ್ತ ತೆರಳುತ್ತಿದ್ದ ಜನರ ಮೇಲೆ ಹಿಂದೂ ಏಕ್ತಾ ಅಘಡಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು. ಇದೇ ವೇಳೆ, ಶಿವಾಜಿ ಪ್ರತಿಷ್ಠಾನ ಮುಖಂಡರು ಹಿಂಸಾಚಾರ ನಡೆಸಲು ಗ್ರಾಮಸ್ಥರಿಗೆ ಪ್ರಚೋದನೆ ನೀಡಿದರು’ ಎಂದು ದೂರಿದರು.
‘ಈ ಹಿಂದೆ ಅಖಿಲ ಭಾರತ ಹಿಂದೂ ಸಭಾ ವಿಜಯೋತ್ಸವಕ್ಕೆ ವಿರೋಧ ವ್ಯಕ್ತಪಡಿಸಿತ್ತು. ನಾವು ಮಾತುಕತೆ ನಡೆಸಿದ ನಂತರ ಹಿಂದೂ ಸಭಾ ವಿರೋಧ ಮಾಡುವುದನ್ನು ಕೈಬಿಟ್ಟಿದೆ' ಎಂದು ತಿಳಿಸಿದರು.
‘ಹಿಂಸಾಚಾರದ ಕುರಿತು ನಡೆಯುವ ನ್ಯಾಯಾಂಗ ತನಿಖೆಯನ್ನು ಹಾಲಿ ನ್ಯಾಯಮೂರ್ತಿಗಳ ಬದಲು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರಿಗೆ ವಹಿಸಬೇಕು’ ಎಂದು ಒತ್ತಾಯಿಸಿದರು.
ರಾಹುಲ್ ಕಿಡಿ
ನವದೆಹಲಿ: ಭೀಮಾ–ಕೋರೆಗಾಂವ್ ಹಿಂಸಾಚಾರಕ್ಕೆ ಬಿಜೆಪಿಯ ಫ್ಯಾಸಿಸ್ಟ್ ಶಕ್ತಿಗಳೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
‘ಮೋದಿ ಸರ್ಕಾರದ ದಲಿತ ವಿರೋಧ ನೀತಿ ವಿರೋಧಿಸಿ ಮಹಾರಾಷ್ಟ್ರದಲ್ಲಿ ಪ್ರತಿಭಟನೆಗಳು ನಡೆದಿವೆ. ದಲಿತರು ಸಮಾಜದ ಕೆಳಹಂತದಲ್ಲಿಯೇ ಉಳಿಯಬೇಕು ಎಂದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಫ್ಯಾಸಿಸ್ಟ್ ಶಕ್ತಿಗಳು ಬಯಸುತ್ತವೆ. ಉನಾ, ರೋಹಿತ್, ವೇಮುಲು ಮತ್ತು ಭೀಮಾ–ಕೋರೆಗಾಂವ್ ಪ್ರತಿರೋಧದ ಸಂಕೇತಗಳಾಗಿವೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.